ಇಂಟರ್ ನ್ಯಾಷನಲ್ ಗ್ರ್ಯಾಂಡ್ ಮಾಸ್ಟರ್ ಒಪೆನ್ ಚೆಸ್ ಟೂರ್ನಿ ಉದ್ಘಾಟಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಬೆಂಗಳೂರು : ರಾಜಕೀಯ ಚದುರಂಗ ಆಟವಿದ್ದಂತೆ. ರಾಜಕಾರಣಿಗಳಾದ ನಾವು ದಿನನಿತ್ಯ ಜೀವನದಲ್ಲಿ ನಮ್ಮ ಚದುರಂಗದ ದಾಳ ಉರುಳಿಸುತ್ತಿರುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಗುರುವಾರ ಇಲ್ಲಿನ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 2ನೆ ಆವೃತ್ತಿಯ ‘ನಮ್ಮ ಬೆಂಗಳೂರು ಇಂಟರ್ ನ್ಯಾಷನಲ್ ಗ್ರ್ಯಾಂಡ್ ಮಾಸ್ಟರ್ ಒಪೆನ್ ಚೆಸ್ ಟೂರ್ನಿ’ಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಪ್ರತಿನಿತ್ಯ ನಮ್ಮ ದಾಳ ಉರುಳಿಸುತ್ತಿರಬೇಕು. ನಮ್ಮ ರಾಜಕೀಯ ಎದುರಾಳಿಗಳ ವಿರುದ್ಧ ಆಕ್ರಮಣ ಮಾಡುತ್ತಿರಬೇಕು ಎಂದು ಹೇಳಿದರು.
ಈ ಟೂರ್ನಿಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಚೆಸ್ ಆಟಗಾರರು ನೋಂದಣಿ ಮಾಡಿಕೊಂಡಿದ್ದಾರೆ. ಗ್ರಾಮೀಣ ಭಾಗದಲ್ಲೂ ಇಂತಹ ಟೂರ್ನಿ ಆಯೋಜಿಸಿ ಆ ಭಾಗದ ಮಕ್ಕಳಿಗೂ ಪ್ರೋತ್ಸಾಹ ನೀಡಬೇಕಗಿದೆ. ಚೆಸ್ ಅಸೋಸಿಯೇಷನ್‍ನವರು ನಮ್ಮ ಜಿಲ್ಲೆಯಲ್ಲೂ ಟೂರ್ನಿ ಆಯೋಜಿಸಬೇಕು ಎಂದು ಅವರು ಹೇಳಿದರು.
ಚೆಸ್ ಆಟವನ್ನು ಮೈಗೂಡಿಸಿಕೊಂಡ ಮಕ್ಕಳು ಶಿಸ್ತು ಕಲಿಯುತ್ತಾರೆ. ಹೀಗಾಗಿ ಮಕ್ಕಳು ಈ ಆಟವಾಡಲು ಪ್ರೋತ್ಸಾಹ ನೀಡುತ್ತಿರುವ ಪೋಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಚೆಸ್ ಆಟದ ಮೂಲಕ ವಿಶ್ವನಾಥನ್ ಆನಂದ್ ಹಾಗೂ ಇತ್ತೀಚಿನ ದಿನಗಳಲ್ಲಿ ಗುಕೇಶ್ ದೇಶದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗುತ್ತಿದ್ದಾರೆ ಎಂದು ಅವರು ಹೇಳಿದರು.
ಇದೇ ವೇಳೆ ಕೆಕೆಆರ್‍ಡಿಬಿ ಅಧ್ಯಕ್ಷ ಅಜಯ್ ಸಿಂಗ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಣದೀಪ್ ಡಿ, ಅಖಿಲ ಭಾರತ ಚೆಸ್ ಫೆಡರೇಷನ್ ಉಪಾಧ್ಯಕ್ಷ ಡಾ.ಡಿ.ಪಿ. ಅನಂತ, ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಮಧುಕರ್ ಟಿ.ಎನ್, ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷೆ ಸೌಮ್ಯ ಎಂ.ಯು ಸೇರಿ ಮತ್ತಿತರರು ಉಪಸ್ಥಿತರಿದ್ದರು.