ಕರ್ತವ್ಯದ ಅವಧಿಯಲ್ಲಿ ಬೇರೆಡೆಗೆ ವೈದ್ಯಕೀಯ ವೃತ್ತಿ | ವೈದ್ಯರ ವಿರುದ್ಧ ಕ್ರಮಕ್ಕೆ ಸರಕಾರಕ್ಕೆ ಪತ್ರ ಬರೆದ ಲೋಕಾಯುಕ್ತ

ಬೆಂಗಳೂರು : ಸರಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆಯಾದ ನೆಫ್ರಾಯುರಾಲಜಿ ಸಂಸ್ಥೆಯಲ್ಲಿನ ಐವರು ವೈದ್ಯರು ಕರ್ತವ್ಯದ ಅವಧಿಯಲ್ಲಿ ಖಾಸಗಿಯಾಗಿ ಬೇರೆಡೆಗೆ ವೈದ್ಯಕೀಯ ವೃತ್ತಿ ನಡೆಸುತ್ತಿರುವುದು ಲೋಕಾಯುಕ್ತ ಪೊಲೀಸರ ತನಿಖೆಯಿಂದ ದೃಢಪಟ್ಟಿದ್ದು, ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ವರದಿ ಸಲ್ಲಿಕೆಯಾಗಿದೆ.
ನೆಫ್ರಾಯುರಾಲಜಿ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ.ಪ್ರದೀಪ್, ಸಹಾಯಕ ಪ್ರಾಧ್ಯಾಪಕರಾದ ಡಾ.ಶ್ರೀಧರ್, ಡಾ.ಕಿಶನ್, ಸಹ ಪ್ರಾಧ್ಯಾಪಕ ಡಾ.ಶಿವಕುಮಾರ್ ಹಾಗೂ ಪ್ರಾಧ್ಯಾಪಕ ಶ್ರೀನಿವಾಸ್ ಅವರು ವಿಚಾರಣೆಗೆ ಒಳಪಟ್ಟಿದ್ದು, ಇವರು ಖಾಸಗಿ ಆಸ್ಪತ್ರೆಗಳಲ್ಲಿಯೂ ಕಾರ್ಯ ನಿರ್ವಹಿಸುತ್ತಿರುವುದ ರಿಂದ ರೋಗಿಗಳಿಗೆ ಸಮಸ್ಯೆಯಾಗುತ್ತಿದೆಯೆಂದು ವರದಿಯಲ್ಲಿ ಹೇಳಲಾಗಿದೆ.
ಅಲ್ಲದೆ, 12(3) ಲೋಕಾಯುಕ್ತ ಕಾಯಿದೆ 1984 ರ ಕಾಯಿದೆಯಡಿ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿದೆ. ಕರ್ತವ್ಯದ ಅವಧಿಯಲ್ಲಿ ಐವರು ವೈದ್ಯರ ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಸಂಸ್ಥೆಯ ವೈದ್ಯರೊಬ್ಬರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಈ ಪ್ರಕರಣದ ತನಿಖೆ ಪೂರ್ಣ ಗೊಂಡಿದ್ದು, ಕರ್ತವ್ಯದ ಅವಧಿಯಲ್ಲಿ ಐವರು ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವ ಹಿಸುತ್ತಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಲೋಕಾಯುಕ್ತ ಅಂತಿಮ ತನಿಖಾ ವರದಿಯನ್ನು ಸರಕಾರಕ್ಕೆ ಮಾ.10 ರಂದು ಸಲ್ಲಿಕೆ ಮಾಡಿದ್ದು, ಐವರ ವಿರುದ್ಧ ಅಮಾನತು ತೂಗುಗತ್ತಿ ನೇತಾಡುತ್ತಿದೆ. ಸರಕಾರಿ ವ್ಯವಸ್ಥೆಯಲ್ಲಿ ವೈದ್ಯರು ಕಾರ್ಯನಿರ್ವಹಿಸುತ್ತಿರುವುದು ತಿಳಿಸಿದ್ದರೂ ಕರ್ತವ್ಯದ ಅವಧಿಯಲ್ಲಿ ಅವರನ್ನು ಕರೆಯಿಸಿರುವ ಖಾಸಗಿ ಆಸ್ಪತ್ರೆಗಳು ವೈದ್ಯರಿಗೆ ಹೆಚ್ಚಿನ ವೇತನ ನೀಡುವ ಮೂಲಕ ಲಾಭ ಮಾಡಿಕೊಳ್ಳುತ್ತಿವೆ ಎಂದು ತನಿಖಾಧಿಕಾರಿ ಹೇಳಿಕೆ ನೀಡಿದ್ದಾರೆ. ಸಂಗ್ರಹಿಸಲಾದ ದಾಖಲೆ, ಹೇಳಿಕೆ ಮತ್ತು ಮಾಹಿತಿಗಳಿಂದ ಐವರು ವೈದ್ಯರ ವಿರುದ್ಧದ ಆರೋಪ ಸಾಬೀತಾಗಿದೆ.
ಜವಾಬ್ದಾರಿಯುತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ (ಹಿಂದಿನ ನಿರ್ದೇಶಕ) ಡಾ.ಕೇಶವಮೂರ್ತಿ ಅವರು ಈ ಪ್ರಕರಣ ಬಗ್ಗೆ ಗಮನಕ್ಕೆ ಬಂದಿದ್ದರೂ ಕ್ರಮ ಕೈಗೊಳ್ಳದೆ ತಮ್ಮ ಗಮನಕ್ಕೆ ಬಂದಿಲ್ಲವೆಂದು ಲಿಖಿತವಾಗಿ ಮಾಹಿತಿ ನೀಡಿದ್ದಾರೆ. ಅವರು ವೈದ್ಯರ ಚಟುವಟಿಕೆ ಬಗ್ಗೆ ಮೇಲ್ವಿಚಾರಣೆ ನಡೆಸಿ, ಉತ್ತರ ಅಥವಾ ಶಿಸ್ತು ಕ್ರಮ ಜರುಗಿಸದೆ ಕರ್ತವ್ಯಲೋಪ ಎಸಗಿರುವುದು ಕಂಡುಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.