‘ಜಾತಿಗಣತಿ ವರದಿ’ ಜಾರಿಯಾದರೆ ಲಿಂಗಾಯಿತ ಶಾಸಕರು ರಾಜೀನಾಮೆ ನೀಡಲಿ : ಪ್ರದೀಪ್ ಕಂಕಣವಾಡಿ
ಸಾಂದರ್ಭಿಕ ಚಿತ್ರ | PC: Grok
ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರಕಾರ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ(ಜಾತಿಗಣತಿ) ವರದಿಯನ್ನು ತರಾತುರಯಲ್ಲಿ ಜಾರಿಗೊಳಿಸುವುದನ್ನು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ತೀವ್ರವಾಗಿ ಖಂಡಿಸುತ್ತಿದ್ದು, ವರದಿ ಜಾರಿಗೆ ಸರಕಾರ ಮುಂದಾದಲ್ಲಿ ಸಮಾಜದ ಹಿತದೃಷ್ಟಿಯಿಂದ ವೀರಶೈವ ಲಿಂಗಾಯತ ಶಾಸಕರು ರಾಜೀನಾಮೆ ನೀಡಬೇಕು ಎಂದು ವೇದಿಕೆ ರಾಷ್ರ್ಟಾಧ್ಯಕ್ಷ ಪ್ರದೀಪ್ ಕಂಕಣವಾಡಿ ಆಗ್ರಹಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಬಲವಾದ ವೀರಶೈವ ಲಿಂಗಾಯತ ಸಮಾಜವನ್ನು ಒಡೆಯುವುದು ಸೇರಿದಂತೆ ಹಲವು ಕುತಂತ್ರಗಳಿಂದ ಕೂಡಿದ ಜಾತಿ ಗಣತಿ ವರದಿಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ವೀರಶೈವ ಲಿಂಗಾಯತ ಶಾಸಕರು ಪಕ್ಷ ಬೇಧ ಮರೆತು ಒಗ್ಗಟ್ಟಾಗಿ ವಿರೋಧಿಸಬೇಕು. ಇಲ್ಲದಿದ್ದಲ್ಲಿ ಶಾಸಕರು ಹಾಗೂ ಸಂಸದರ ಮನೆಗಳಿಗೆ ತೆರಳಿ, ಅವರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಘೇರಾವ್ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಚಿವ ಸಂಪುಟದಲ್ಲಿ ವ್ಯತಿರಿಕ್ತವಾಗಿ ನಿರ್ಣಯ ಕೈಗೊಂಡರೆ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು. 2 ಕೋಟಿಗಿಂತ ವೀರಶೈವ ಲಿಂಗಾಯತ ಸಮಾಜದ ಸಂಖ್ಯೆ ಇಲ್ಲದಿದ್ದರೆ ಅವರ ನಿರ್ಧಾರಕ್ಕೆ ಬದ್ಧ ಎಂದು ಸವಾಲು ಹಾಕಿದರು.
ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಮಠಾಧೀಶರು ಧ್ವನಿ ಎತ್ತಬೇಕು. ಹಾಗೂ ವ್ಯತಿರಿಕ್ತವಾಗಿ ನಿರ್ಣಯ ಕೈಗೊಂಡರೆ ಹೋರಾಟದ ಮುಂಚೂಣಿಗೆ ಬರಬೇಕು. ಕೆಲ ಸಮುದಾಯಗಳನ್ನು ಓಲೈಸುವ ಸಲುವಾಗಿ ರಾಜ್ಯದ ಪ್ರಬಲ ಜಾತಿಗಳನ್ನು ಒಡೆದು ಆಳುವ ನೀತಿಗೆ ರಾಜ್ಯ ಸರಕಾರ ಮುಂದಾಗಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೀರಶೈವ ಲಿಂಗಾಯತ ಸಮುದಾಯದ ವಿರೋಧಿ ಎಂಬುದನ್ನು ಎರಡು ಮೂರು ಬಾರಿ ಸಾಬೀತು ಮಾಡಿದ್ದಾರೆ. ವೀರಶೈವ ಲಿಂಗಾಯತ ಸಮಾಜದ 54 ಶಾಸಕರು ಸಭೆ ನಡೆಸಿ ಕೂಡಲೇ ಸಮುದಾಯದ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಕಾರ್ಯದರ್ಶಿ ಶಂಕರಯ್ಯ, ಪುರೋಹಿತ ವಿಭಾಗದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ, ರಾಜ್ಯಾಧ್ಯಕ್ಷ ಕಾಡಯ್ಯ ಹಿರೇಮಠ, ರಾಜಣ್ಣ, ಬಸವರಾಜ ಶಾಸ್ತ್ರಿ ಮತ್ತಿತರರು ಹಾಜರಿದ್ದರು.