ವಿದೇಶದ ನೆಲದಲ್ಲಿ ಮೃತಹೊಂದಿದ ಕನ್ನಡಿಗರ ವಾಪಾಸಾತಿಗೆ ಎನ್‍ಆರ್‌ಐ ಫೋರಂ ನೆರವು
ಎನ್‍ಆರ್‌ಐ ಫೋರಂ ಉಪಾಧ್ಯಕ್ಷೆ ಆರತಿ ಕೃಷ್ಣ
ಬೆಂಗಳೂರು: ಆಫ್ರಿಕಾ ದೇಶದ ಎರಡು ಪ್ರತ್ಯೇಕ ಘಟನೆಗಳಲ್ಲಿ ಮೃತಪಟ್ಟ ಕನ್ನಡಿಗರ ಮೃತದೇಹವನ್ನು ಭಾರತಕ್ಕೆ ತರುವ ಪ್ರಯತ್ನದಲ್ಲಿ ಅನಿವಾಸಿ ಭಾರತೀಯ ಸಮಿತಿಯು ಯಶಸ್ವಿಯಾಗಿದ್ದು, ಕರ್ನಾಟಕ ಸರಕಾರದ ಭಾರತೀಯ ಎನ್‍ಆರ್‌ಐ ಫೋರಂ ಉಪಾಧ್ಯಕ್ಷೆ ಡಾ.ಆರತಿ ಕೃಷ್ಟ ನೇತೃತ್ವದಲ್ಲಿ ಇಬ್ಬರು ಮೃತ ಕನ್ನಡಿಗರ ಕುಟುಂಬಕ್ಕೆ ಸಹಾಯ ದೊರೆತಂತಾಗಿದೆ.
ಇತ್ತೀಚೆಗೆ ಗಿನಿಯಾದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಂಗಳೂರು ನಿವಾಸಿ ರಜತ್ (26) ಅವರ ಮೃತ ದೇಹವನ್ನು ಭಾರತಕ್ಕೆ ತರಲು ಸ್ಥಳೀಯ ವಿದೇಶಾಂಗ ಸಚಿವಾಲಯದ ಅನುಮತಿ ಅಗತ್ಯವಿತ್ತು. ಕುಟುಂಬಸ್ಥರ ಕೋರಿಕೆಯ ಮೇರೆಗೆ ಭಾರತೀಯ ಎನ್‍ಆರ್ ಐ ಫೋರಂನ ಸಕಾಲಿಕ ಹಸ್ತಕ್ಷೇಪದಿಂದ ರಜತ್ ಅವರ ಮೃತದೇಹವನ್ನು ಸೋಮವಾರ ರಾತ್ರಿ ಬೆಂಗಳೂರಿಗೆ ವಿಮಾನದಲ್ಲಿ ಕರೆತಂದು ನಂತರ ಮಂಗಳೂರಿಗೆ ರವಾನಿಸಲಾಗಿದ್ದು, ಮಂಗಳವಾರ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಗಿನಿಯಾದ ನೆಜೆರೆಕೊರೆ ನಗರಕ್ಕೆ ಗಿಡಮೂಲಿಕೆ ಔಷಧಿಗಳನ್ನು ಮಾರಾಟ ಮಾಡಲು ತೆರಳಿದ್ದ ಶಿವಮೊಗ್ಗದ ಹಕ್ಕಿಪಿಕ್ಕಿ ಸಮುದಾಯದ ಸದಸ್ಯೆ ಶಿಮಿಲಾ ಶಿಕಾರಾಮಿ (40) ಅನಾರೋಗ್ಯದಿಂದ ನಿಧನ ಹೊಂದಿದ್ದರು. ಮಾಹಿತಿ ತಿಳಿದ ಕೂಡಲೇ ವಿದೇಶಾಂಗ ಸಚಿವಾಲಯವು ಗಿನಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕ ಸಾಧಿಸಿ ಅಗತ್ಯ ರಾಜತಾಂತ್ರಿಕ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ಫೋರಂ ಖಚಿತಪಡಿಸಿದೆ. ವೇದಿಕೆಯು ರಾಯಭಾರ ಕಚೇರಿಯೊಂದಿಗೆ ನಿಕಟವಾಗಿ ಸಂಪರ್ಕದಲ್ಲಿದ್ದು, ಮೃತದೇಹ ಕರೆತರುವ ಪ್ರಕ್ರಿಯೆ ಮುಂದುವರೆದಿದೆ.
‘ವಿದೇಶಕ್ಕೆ ತೆರಳಿ ಅಲ್ಲಿ ಸಂಕಷ್ಟಕ್ಕೆ ಒಳಗಾದ ಕನ್ನಡಿಗರನ್ನು ಸುರಕ್ಷಿತವಾಗಿರಿಸಲು ವೇದಿಕೆಯು ಬದ್ಧವಾಗಿದೆ ಮತ್ತು ಅಂತಹ ಕಷ್ಟದ ಸಂದರ್ಭಗಳಲ್ಲಿ ಕುಟುಂಬಗಳಿಗೆ ನೆರವಾಗಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ವೇದಿಕೆಯು ಸದಾ ಸಿದ್ಧವಿರುತ್ತದೆ’
-ಡಾ.ಆರತಿ ಕೃಷ್ಣ ಎನ್‍ಆರ್‌ಐ ಫೋರಂ ಉಪಾಧ್ಯಕ್ಷೆ