ರಾಜ್ಯದಲ್ಲಿ ಜೈನರ ಸಂಖ್ಯೆ ಕಡಿಮೆ ಇದೆ ಎಂದು ಬಿಂಬಿಸಿರುವುದು ಸರಿಯಲ್ಲ : ಆಚಾರ್ಯ ಶ್ರೀ ಗುಣಧರನಂದಿ
ಸಾಂದರ್ಭಿಕ ಚಿತ್ರ
ಬೆಂಗಳೂರು : ರಾಜ್ಯ ಸರಕಾರ ಬಹಿರಂಗಪಡಿಸಲು ಮುಂದಾಗಿರುವ ಜಾತಿಗಣತಿ ವರದಿಯು ಅವೈಜ್ಞಾನಿಕವಾಗಿದ್ದು, ರಾಜ್ಯದಲ್ಲಿ ಜೈನ ಸಮುದಾಯದ ಸಂಖ್ಯೆ ಕಡಿಮೆ ಇದೆ ಎಂದು ಬಿಂಬಿಸಿರುವುದು ಸರಿಯಲ್ಲ. ಈ ಕುರಿತು ನಾವೇ ಸಮೀಕ್ಷೆ ನಡೆಸಿ ರಾಜ್ಯ ಸರಕಾರಕ್ಕೆ ಸಲ್ಲಿಕೆ ಮಾಡುತ್ತೇವೆ ಎಂದು ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜ ತಿಳಿಸಿದ್ದಾರೆ.
ಗುರುವಾರ ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜೈನ ಸಮುದಾಯ ಕೇವಲ 1,65,565 ಜನಸಂಖ್ಯೆ ಹೊಂದಿದೆ ಎಂದು ಅಂಕಿ-ಅಂಶಗಳಿಲ್ಲದೆ ಜಾತಿಗಣತಿಯಲ್ಲಿ ತಿಳಿಸಿದ್ದಾರೆ. ಇದನ್ನು ನಾವು ಸಂಪೂರ್ಣವಾಗಿ ವಿರೋಧಿಸುತ್ತೇವೆ. ಇದರಿಂದ ಜೈನ ಸಮಾಜಕ್ಕೆ ಅನ್ಯಾಯವಾಗುತ್ತದೆ. ಹೀಗಾಗಿ, ಸ್ವತಃ ನಾವೇ ಇಂದಿನಿಂದ ರಾಜ್ಯಾದ್ಯಂತ ಸಂಚರಿಸಿ ಜಾತಿ ಸಮೀಕ್ಷೆ ನಡೆಸಿ ಜೂ.8ರಂದು ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದರು.
ದೋಷಪೂರಿತ ವರದಿಯನ್ನು ಸರಕಾರ ಒಪ್ಪಿಕೊಳ್ಳುವುದರಿಂದ ಅನೇಕರಿಗೆ, ಶಿಕ್ಷಣ, ರಾಜಕಾರಣ, ಉದ್ಯೋಗ ಹಾಗೂ ವ್ಯವಸಾಯ ಸೇರಿದಂತೆ ಅನೇಕ ರೀತಿಯಲ್ಲಿ ಜಾತಿ, ಉಪಜಾತಿಗಳಿಗೆ ಅನ್ಯಾಯವಾಗಬಹುದು ಎಂದು ಅವರು ಉಲ್ಲೇಖಿಸಿದರು.