ದುಬಾರಿ ಶ್ವಾನಗಳ ಖರೀದಿಸುವ ಶ್ವಾನಪ್ರಿಯನ ನಿವಾಸದ ಮೇಲೆ ಈ.ಡಿ. ದಾಳಿ, ಪರಿಶೀಲನೆ
Update: 2025-04-17 23:15 IST

PC : PTI
PC : PTIಬೆಂಗಳೂರು: ದುಬಾರಿ ಶ್ವಾನಗಳ ಖರೀದಿ ಮಾಡುವ ಶ್ವಾನಪ್ರಿಯ ಸತೀಶ್ ಕ್ಯಾಡಬೋಮ್ಸ್ ಎಂಬವರ ಜೆ.ಪಿ.ನಗರದ ನಿವಾಸದ ಮೇಲೆ ಗುರುವಾರ ಜಾರಿ ನಿರ್ದೇಶನಾಲಯ ಈ.ಡಿ.ದ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲಿಸಿದ್ದಾರೆ.
ಸತೀಶ್ ಕ್ಯಾಡಬೋಮ್ಸ್ ಅವರು ದೇಶ-ವಿದೇಶಗಳ ವಿಭಿನ್ನ ತಳಿಯ ದುಬಾರಿ ಬೆಲೆಯ ನಾಯಿಗಳನ್ನು ಸಾಕುವ ಹವ್ಯಾಸ ಹೊಂದಿದ್ದು, ಅವರ ಕೋಟ್ಯಂತರ ರೂಪಾಯಿ ವಿದೇಶಿ ವ್ಯವಹಾರದ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಈ.ಡಿ. ಅಧಿಕಾರಿಗಳು ತನಿಖೆ ಕೈಕೊಂಡಿದ್ದಾರೆ.
ಇತ್ತೀಚೆಗೆ ಸಿನೆಮಾವೊಂದರ ಪ್ರಚಾರ ಕಾರ್ಯಕ್ಕೆ ಅತಿಥಿಯಾಗಿ ಆಗಮಿಸಿದ್ದ ಸತೀಶ್ ಕ್ಯಾಡಬೋಮ್ಸ್, 'ನಾನು ತೋಳ ಹಾಗೂ ಕಕೇಶಿಯನ್ ಶೆಫರ್ಡ್ ಮಿಶ್ರಿತ ಶ್ವಾನ ಖರೀದಿಸಿದ್ದು ಅದರ ಮೌಲ್ಯ 50 ಕೋಟಿ ರೂಪಾಯಿ. ವಿಶ್ವದಲ್ಲಿ ಈ ತಳಿಯ ಒಂದೇ ಶ್ವಾನವಿದ್ದು, ಅದನ್ನು ಖರೀದಿಸಿದ್ದೇನೆ' ಎಂದು ಹೇಳಿಕೊಂಡಿದ್ದರು.