‘ಖಾಸಗಿ ಹಜ್ ಆಯೋಜಕರ ಕೋಟಾ ರದ್ದು-ಸಂಕಷ್ಟಕ್ಕೆ ಸಿಲುಕಿರುವ ಸಾವಿರಾರು ಜನ’ : ಸೌದಿ ಅರೇಬಿಯಾ ಜೊತೆ ಮಾತನಾಡುವಂತೆ ಪ್ರಧಾನಿಗೆ ಕೆಎಸ್‍ಎಚ್‍ಒಎ ಮನವಿ
ಸಾಂದರ್ಭಿಕ ಚಿತ್ರ | PTI
ಬೆಂಗಳೂರು : ಸೌದಿ ಅರೇಬಿಯಾ ಸರಕಾರವು ಖಾಸಗಿ ಹಜ್ ಆಯೋಜಕರ ಕೋಟಾವನ್ನು ರದ್ದು ಮಾಡಿರುವುದರಿಂದ, ದೇಶದ ಸಾವಿರಾರು ಮಂದಿ ಹಜ್ ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂಬಂಧ ತಮ್ಮ ಸೌದಿ ಅರೇಬಿಯಾ ಭೇಟಿ ಸಂದರ್ಭದಲ್ಲಿ ಚರ್ಚೆ ಮಾಡಿ, ಸಮಸ್ಯೆ ಬಗೆಹರಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಕರ್ನಾಟಕ ರಾಜ್ಯ ಹಜ್ ಆಯೋಜಕರ ಸಂಘ(ಕೆಎಸ್‍ಎಚ್‍ಒಎ)ವು ಮನವಿ ಮಾಡಿದೆ.
ಈ ಸಂಬಂಧ ಸೋಮವಾರ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಕೆಎಸ್‍ಎಚ್‍ಒಎ ಮುಖ್ಯಸ್ಥ ಇಕ್ಬಾಲ್ ಅಹ್ಮದ್ ಸಿದ್ದೀಖಿ, ಪ್ರಸಕ್ತ ಸಾಲಿನ ಪವಿತ್ರ ಹಜ್ ಯಾತ್ರೆಗೆ ಸಂಬಂಧಿಸಿದಂತೆ ಸೌದಿ ಅರೇಬಿಯಾದ ಬ್ಯಾಂಕಿಂಗ್ ವ್ಯವಸ್ಥೆಯ ತಾಂತ್ರಿಕ ದೋಷದಿಂದ ಹಜ್ ಆಯೋಜಕರ ಐಬಾನ್ ಖಾತೆ ನಿಷ್ಕ್ರಿಯವಾಯಿತು. ಇದರ ಪರಿಣಾಮವಾಗಿ ಹಣ ಪಾವತಿ ಪ್ರಕ್ರಿಯೆಯಲ್ಲಿ ವಿಳಂಬ ಉಂಟಾಗಿ, ಖಾಸಗಿ ಹಜ್ ಆಯೋಜಕರ ಹಜ್ ಕೋಟಾ ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಸೌದಿ ಅರೇಬಿಯಾ ಸರಕಾರವು ಹಜ್ ಕೋಟಾ ರದ್ದಾಗಿರುವುದಕ್ಕೆ ಭಾರತೀಯ ಹಜ್ ಆಯೋಜಕರ ದೋಷವೇನೂ ಇಲ್ಲ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಹಜ್ ವಿಭಾಗವು ಮಾ.6ರಂದು ಬರೆದಿರುವ ಪತ್ರದಲ್ಲಿ ಸ್ಪಷ್ಟಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಎ.22 ಮತ್ತು 23ರಂದು ಸೌದಿ ಅರೇಬಿಯಾಗೆ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ಈ ವಿಷಯವನ್ನು ಸೌದಿ ನಾಯಕತ್ವದ ಗಮನಕ್ಕೆ ತರಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಅಲ್ಲದೇ, ರದ್ದಾಗಿರುವ ಹಜ್ ಕೋಟಾವನ್ನು ಪುನಃ ಸ್ಥಾಪಿಸುವಂತೆ ಸೌದಿ ಅರೇಬಿಯಾ ಅಧಿಕಾರಿಗಳ ಮನವೊಲಿಸಬೇಕು. ಖಾಸಗಿ ಹಜ್ ಆಯೋಜಕರ ಮೂಲಕ ನೋಂದಾಯಿಸಿಕೊಂಡಿದ್ದ ಸಾವಿರಾರು ಭಾರತೀಯ ಯಾತ್ರಾರ್ಥಿಗಳು ಈಗ ಸಂಕಷ್ಟದಲ್ಲಿದ್ದಾರೆ. ಹಲವಾರು ಜನರಿಗಿದು ಜೀವಮಾನದಲ್ಲಿ ಒಂದು ಬಾರಿ ಸಿಗುವ ಪವಿತ್ರ ಯಾತ್ರೆ. ಹಜ್ ಕೋಟಾ ಪುನಃ ಸ್ಥಾಪನೆಯಿಂದ ಈ ಕುಟುಂಬಗಳಿಗೆ ಬಹುಮಟ್ಟಿಗೆ ನೆಮ್ಮದಿ ಸಿಗಲಿದೆ ಮತ್ತು ಭಾರತದ ಗೌರವ ಉಳಿಯಲಿದೆ ಎಂದು ಇಕ್ಬಾಲ್ ಅಹ್ಮದ್ ಸಿದ್ದೀಖಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಹಾಗೂ ರಾಜತಾಂತ್ರಿಕ ಒತ್ತಡದಿಂದಾಗಿ ನಮ್ಮ ಸಮಸ್ಯೆಗೆ ಅಗತ್ಯ ಪರಿಹಾರ ಸಿಗುಬಹುದು ಎಂದು ಭಾರತದಾದ್ಯಂತ ಹಜ್ ಆಯೋಜಕರ ಸಂಘಗಳು ನಂಬಿಕೆ ಇರಿಸಿವೆ ಎಂದು ಅವರು ತಿಳಿಸಿದ್ದಾರೆ.
‘ಪ್ರಧಾನಿ ಮೋದಿ ಸೇರಿದಂತೆ ಕೇಂದ್ರ ಸರಕಾರದ ಉನ್ನತಮಟ್ಟದ ಅಧಿಕಾರಿಗಳು ಹಾಗೂ ಸೌದಿ ಅರೇಬಿಯಾ ಸರಕಾರದ ಜೊತೆ ನಮ್ಮ ಪ್ರತಿನಿಧಿಗಳು ನಿರಂತರ ಸಂಪರ್ಕದಲ್ಲಿದ್ದು, ಸಮಸ್ಯೆ ಬಗೆಹರಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೌದಿ ಅರೇಬಿಯಾ ಭೇಟಿ ಸಂದರ್ಭದಲ್ಲಿ ಈ ಸಮಸ್ಯೆಗೆ ಪರಿಹಾರ ಸಿಗಬಹುದು ಎಂಬ ನಂಬಿಕೆಯಿದೆ’
-ಶೌಕತ್ ಅಲಿ ಸುಲ್ತಾನ್, ಅಧ್ಯಕ್ಷ, ಕೆಎಸ್‍ಎಚ್‍ಒಎ