ಯಶಸ್ವಿನಿ ಯೋಜನೆಯಲ್ಲಿನ ಚಿಕಿತ್ಸಾ ದರ ಪರಿಷ್ಕರಣೆಗೆ ವರದಿ ಸಲ್ಲಿಕೆ

Update: 2025-04-22 22:32 IST
ಯಶಸ್ವಿನಿ ಯೋಜನೆಯಲ್ಲಿನ ಚಿಕಿತ್ಸಾ ದರ ಪರಿಷ್ಕರಣೆಗೆ ವರದಿ ಸಲ್ಲಿಕೆ
  • whatsapp icon

ಬೆಂಗಳೂರು: ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಡಿ ನೀಡುತ್ತಿದ್ದ ಚಿಕಿತ್ಸೆಗಳ ದರವು ಪ್ರಸ್ತುತಕ್ಕಿಂತ 70 ಕೋಟಿ ರೂ. ಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ ಸರಕಾರದಿಂದ ಹೆಚ್ಚುವರಿಯಾಗಿ 40 ಕೋಟಿ ರೂ. ಅನುದಾನ ಮತ್ತು ಸದಸ್ಯರು ಪಾವತಿಸುವ ವಂತಿಗೆ ಮೊತ್ತದಿಂದ 30 ಕೋಟಿ ರೂ. ಅನುದಾನವನ್ನು ಭರಿಸುವ ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ಚಿಕಿತ್ಸಾ ದರ ಪರಿಷ್ಕರಣೆ ಸಮಿತಿ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿದೆ.

ಶಾಸಕ ಡಾ. ಶ್ರೀನಿವಾಸ ಎನ್.ಟಿ. ಅಧ್ಯಕ್ಷತೆಯಲ್ಲಿ ರಚಿಸಿದ್ದ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ಚಿಕಿತ್ಸಾ ದರ ಪರಿಷ್ಕರಣೆ ಸಮಿತಿಯು ಮಂಗಳವಾರದಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವರದಿಯನ್ನು ಸಲ್ಲಿಸಿದೆ.

ಈಗಿನ ಯಶಸ್ವಿನಿ ಯೋಜನೆಯಲ್ಲಿ 2,128 ಚಿಕಿತ್ಸೆಗಳನ್ನು ನೀಡಲಾಗುತ್ತಿದ್ದು, ಇದರಲ್ಲಿ 6 ಚಿಕಿತ್ಸೆಗಳನ್ನು ತಜ್ಞರ ಸಲಹೆಯಂತೆ ಕೈಬಿಡಲಾಗಿದೆ. ಅದೇ ರೀತಿ ಇತ್ತೀಚಿಗೆ ಪ್ರವರ್ಧಮಾನಕ್ಕೆ ಬಂದಿರುವ ಇಂಟರ್‍ವೆಂನ್ಷಲ್ ರೇಡಿಯಾಲಾಜಿ, ಸಿಟಿವಿಎಸ್, ಮಾನಸಿಕ ಕಾಯಿಲೆಗಳು, ಕ್ಯಾನ್ಸರ್ ಕಾಯಿಲೆಗಳು ಮುಂತಾದ ವಿಭಾಗಗಳ ಒಟ್ಟು 69 ಹೊಸ ಚಿಕಿತ್ಸೆಗಳನ್ನು ತಜ್ಞರ ಸಲಹೆಯಂತೆ ಯೋಜನೆಯಲ್ಲಿ ಸೇರಿಸಲಾಗಿದೆ. ಇದರಿಂದಾಗಿ ಯೋಜನೆಯಲ್ಲಿ ಒಟ್ಟು 2,191 ಚಿಕಿತ್ಸೆಗಳನ್ನು ಅಂತಿಮಗೊಳಿಸಿದಂತಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

ಯಶಸ್ವಿನಿ ಯೋಜನೆಯಡಿ 2024-25ರಲ್ಲಿ 68,159 ಫಲಾನುಭವಿಗಳು 117.79 ಕೋಟಿ ರೂ.ಗಳ ಚಿಕಿತ್ಸೆಯನ್ನು ಪಡೆದಿದ್ದು, ಸರಾಸರಿ ಒಂದು ಚಿಕಿತ್ಸಾ ವೆಚ್ಚ 17 ಸಾವಿರ ರೂ. ಆಗಿದೆ. ಮುಂದಿನ ವರ್ಷದಲ್ಲಿ ಸುಮಾರು 75 ಸಾವಿರ ಫಲಾನುಭವಿಗಳು ಯೋಜನೆಯಡಿ ಚಿಕಿತ್ಸೆ ಪಡೆಯಲಿದ್ದು, ಅದರಂತೆ ಸುಮಾರು 127.50 ಕೋಟಿ ರೂ. ವೆಚ್ಚ ಆಗಲಿದೆ ಎಂದು ಸಮಿತಿ ಹೇಳಿದೆ.

ಆರೋಗ್ಯ ಸೇವೆಯಲ್ಲಿ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಉನ್ನತ ಮಟ್ಟದ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಹೀಗಾಗಿ ಸರಾಸರಿ ಚಿಕಿತ್ಸಾ ದರದಲ್ಲಿ ಶೇ.50 ರಿಂದ ಶೇ.55ರವರಗೆ ಹೆಚ್ಚಳವಾಗಲಿದೆ. ಯೋಜನೆಯಡಿ ಚಿಕಿತ್ಸೆಗೆ ಸುಮಾರು 70 ಕೋಟಿ ರೂ.ರವರೆಗೆ ದರ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಸಮಿತಿಯು ಅಂದಾಜಿಸಿದೆ.

ಈ ಹೆಚ್ಚಳವಾಗುವ ಆರ್ಥಿಕ ಹೊರೆಯಲ್ಲಿ ಸರಕಾರದಿಂದ 40 ಕೋಟಿ ರೂ. ಹೆಚ್ಚುವರಿ ಅನುದಾನವನ್ನು ಒದಗಿಸುವ ಮೂಲಕ ಮತ್ತು 30 ಕೋಟಿ ರೂ.ಗಳನ್ನು ಯೋಜನೆಯ ಸದಸ್ಯರು ಪಾವತಿಸುವ ವಂತಿಗೆ ಮೊತ್ತದಿಂದ ಭರಿಸುವ ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸಬಹುದು ಎಂದು ವರದಿ ತಿಳಿಸಿದೆ.

ಚಿಕಿತ್ಸಾ ದರ ಪರಿಷ್ಕರಣೆಯಾದರೆ ಪ್ರಮುಖ ಆಸ್ಪತ್ರೆಗಳು ಯೋಜನೆಯಲ್ಲಿ ಸೇರಿಕೊಳ್ಳುತ್ತವೆ. ಇದರಿಂದ ಹೆಚ್ಚು ಹೆಚ್ಚು ಸದಸ್ಯರು ನೋಂದಣಿಯಾಗುವ ಸಾಧ್ಯತೆ ಇದೆ. ಹೆಚ್ಚು ವಂತಿಕೆ ಸಂಗ್ರಹವಾಗುವ ಅವಕಾಶ ಇದ್ದು, ಮುಂದಿನ ದಿನಗಳಲ್ಲಿ ಸರಕಾರದ ಮೇಲೆ ಹೊರೆ ಕಡಿಮೆ ಆಗಲಿದೆ ಎಂದು ಡಾ. ಶ್ರೀನಿವಾಸ ಎನ್.ಟಿ. ಸಮಿತಿ ಶಿಫಾರಸು ಮಾಡಿದೆ.

ಪರಿಷ್ಕೃತ ಯಶಸ್ವಿನಿ ಯೋಜನೆಯನ್ನು ರಾಜ್ಯ ಸರಕಾರವು 2022-23ರಿಂದ ಮರುಜಾರಿಗೊಳಿಸಿದೆ. ಪ್ರಸ್ತುತ ಯಶಸ್ವಿನಿ ಯೋಜನೆಯಲ್ಲಿನ ಚಿಕಿತ್ಸಾ ದರಗಳು 2017-18 ಅವಧಿಯಲ್ಲಿ ನಿಗದಿ ಮಾಡಿದ ದರಗಳಾಗಿದ್ದು, ಪ್ರಸ್ತುತ ಮಾರುಕಟ್ಟೆ ದರಗಳಿಗೆ ಹೋಲಿಸಿದಲ್ಲಿ ಅತ್ಯಂತ ಕಡಿಮೆ ಇರುವುದಾಗಿ ತಿಳಿಸಿ ಪ್ರಮುಖ ಆಸ್ಪತ್ರೆಗಳು ಯೋಜನೆಯಡಿ ನೆಟ್ ವರ್ಕ್ ಆಸ್ಪತ್ರೆಗಳಾಗಿ ಸೇರಿಕೊಳ್ಳಲು ಮುಂದೆ ಬರುತ್ತಿಲ್ಲ. ಹೀಗಾಗಿ ಚಿಕಿತ್ಸೆಗಳ ದರಗಳನ್ನು ಪರಿಷ್ಕರಿಸಲು ಸರಕಾರವು ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಅಧ್ಯಕ್ಷತೆಯಲ್ಲಿ ತಜ್ಞ ವೈದ್ಯರನ್ನೊಳಗೊಂಡ ದರ ಪರಿಷ್ಕರಣಾ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯಲ್ಲಿ ಪ್ರತಿಷ್ಠಿತ ಆಸ್ಪತ್ರೆಗಳ 8 ತಜ್ಞ ವೈದ್ಯರಲ್ಲದೇ ವಿವಿಧ ವೈದ್ಯಕೀಯ ವಿಭಾಗಗಳ 11 ವಿಶೇಷ ಆಹ್ವಾನಿತ ತಜ್ಞ ವೈದ್ಯರನ್ನು ಆಹ್ವಾನಿಸಿ 13 ಸಭೆಗಳನ್ನು ನಡೆಸಿ ಸಲಹೆ ಸೂಚನೆಗಳನ್ನು ಪಡೆದು ದರ ಪರಿಷ್ಕರಣೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News