×
Ad

ಭಯೋತ್ಪಾದನೆ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು : ಡಿ.ಕೆ.ಸುರೇಶ್

Update: 2025-04-24 15:54 IST

ಬೆಂಗಳೂರು : “ಭಯೋತ್ಪಾದನೆ ವಿರುದ್ಧ ನಾವು ಒಟ್ಟಾಗಿ ನಿಂತು ಹೋರಾಟ ಮಾಡಬೇಕು. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿರ್ಧಾರಗಳಿಗೆ ನಮ್ಮ ಸಹಕಾರವಿದೆ” ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು.

ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಕನ್ನಡಿಗ ಭರತ್ ಭೂಷಣ್ ಅವರ ಮತ್ತಿಕೆರೆ ನಿವಾಸಕ್ಕೆ ಮಾಜಿ ಸಂಸದ ಡಿ.ಕೆ ಸುರೇಶ್ ಅವರು ಗುರುವಾರ ತೆರಳಿ, ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸುರೇಶ್ ಅವರು, “ಜಮ್ಮು ಕಾಶ್ಮೀರದಲ್ಲಿ ನಡೆದಿರುವ ಭಯೋತ್ಪಾದಕರ ದಾಳಿಯನ್ನು ನಾವು ಖಂಡಿಸುತ್ತೇವೆ. ಮೊದಲು ದೇಶ ನಂತರ ಉಳಿದ ವಿಚಾರಗಳು. ಈ ದಾಳಿ ವಿರುದ್ಧ ನಾವೆಲ್ಲರೂ ಒಟ್ಟಾಗಿ ನಿಲ್ಲಬೇಕು, ಭಯೋತ್ಪಾದನೆ ವಿರುದ್ಧ ಹೋರಾಟ ಮಾಡಬೇಕು. ಭವಿಷ್ಯದಲ್ಲಿ ನಮ್ಮ ಪ್ರಜೆಗಳ ರಕ್ಷಣೆ ಮಾಡಬೇಕು. ಪ್ರತಿಯೊಬ್ಬರ ಜೀವವೂ ಬಹಳ ಮುಖ್ಯವಾದುದು” ಎಂದು ತಿಳಿಸಿದರು.

ಇದು ಗುಪ್ತಚರ ಇಲಾಖೆ ವೈಫಲ್ಯವೇ ಎಂದು ಕೇಳಿದಾಗ, “ಇಂತಹ ಪರಿಸ್ಥಿತಿಯಲ್ಲಿ ನಾನು ಈ ವಿಚಾರವಾಗಿ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಕಠಿಣ ಹೆಜ್ಜೆ ಇಡಬೇಕು. ಪ್ರಧಾನಮಂತ್ರಿಗಳು ಹಾಗೂ ಗೃಹ ಸಚಿವರು ಭದ್ರತಾ ಸಿಬ್ಬಂದಿಗಳ ಜತೆ ನಿರಂತರ ಸಭೆ ಮಾಡುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಎಲ್ಲರೂ ಸರ್ಕಾರಕ್ಕೆ ಸಹಕಾರ ನೀಡಬೇಕು. ಕಾಂಗ್ರೆಸ್ ಪಕ್ಷ ಸರ್ಕಾರದ ನಿರ್ಧಾರಗಳಿಗೆ ಬೆಂಬಲ ನೀಡಲಿದೆ” ಎಂದು ತಿಳಿಸಿದರು,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News