ಚಿನ್ನ ವಂಚನೆ ಪ್ರಕರಣ | ಐಶ್ವರ್ಯ ಗೌಡ, ವಿನಯ್ ಕುಲಕರ್ಣಿ ನಿವಾಸಗಳ ಮೇಲೆ ಈ.ಡಿ. ದಾಳಿ, ಪರಿಶೀಲನೆ
ಸಾಂದರ್ಭಿಕ ಚಿತ್ರ | PC: PTI
ಬೆಂಗಳೂರು: ಚಿನ್ನ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಐಶ್ವರ್ಯ ಗೌಡ ಅವರ ಬೆಂಗಳೂರು ಹಾಗೂ ಮಂಡ್ಯದ ನಿವಾಸ, ಶಾಸಕ ವಿನಯ್ ಕುಲಕರ್ಣಿ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ(ಈ.ಡಿ.) ಅಧಿಕಾರಿಗಳು ಗುರುವಾರ ದಾಳಿ ಕೈಗೊಂಡು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಇಬ್ಬರು ಸಿಆರ್‍ಪಿಎಫ್ ಸಿಬ್ಬಂದಿಯ ಭದ್ರತೆಯೊಂದಿಗೆ ಈ.ಡಿ. ಅಧಿಕಾರಿಗಳ ತಂಡ ಏಕಕಾಲಕ್ಕೆ ಶಾಸಕ ವಿನಯ್ ಕುಲಕರ್ಣಿ ಅವರ ಬೆಂಗಳೂರಿನ ನಿವಾಸ ಹಾಗೂ ಐಶ್ವರ್ಯ ಗೌಡ ಅವರ ಮಂಡ್ಯದ ಕಿರುಗಾವಲು ಗ್ರಾಮದಲ್ಲಿರುವ ನಿವಾಸ ಹಾಗೂ ಬೆಂಗಳೂರಿನ ನಿವಾಸದ ಮೇಲೆ ದಾಳಿ ನಡೆಸಿದ್ದು, ಕಡತಗಳು ಹಾಗೂ ದಾಖಲೆಗಳ ಶೋಧ ಮಾಡಿರುವುದಾಗಿ ತಿಳಿದುಬಂದಿದೆ.
ಐಶ್ವರ್ಯ ಗೌಡ ವಿರುದ್ಧ ಸುಮಾರು 9 ಕೋಟಿ ರೂ. ಮೌಲ್ಯದ ಚಿನ್ನ ವಂಚನೆ ಮಾಡಿದ ಆರೋಪವಿದೆ. ಅಲ್ಲದೆ, ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಹೆಸರಿನಲ್ಲಿ ವಂಚನೆ ಎಸಗಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ 2024ರ ಡಿಸೆಂಬರ್‍ನಲ್ಲಿ ಡಿ.ಕೆ.ಸುರೇಶ್ ದೂರು ಸಲ್ಲಿಸಿದ್ದರು.