ದೇಶ ಐಕ್ಯತೆಗೆ ಡಾ.ರಾಜ್‍ಕುಮಾರ್ ವ್ಯಕ್ತಿತ್ವ ಮಾದರಿ : ರಿಝ್ವಾನ್ ಅರ್ಶದ್

Update: 2025-04-24 22:11 IST
ದೇಶ ಐಕ್ಯತೆಗೆ ಡಾ.ರಾಜ್‍ಕುಮಾರ್ ವ್ಯಕ್ತಿತ್ವ ಮಾದರಿ : ರಿಝ್ವಾನ್ ಅರ್ಶದ್
  • whatsapp icon

ಬೆಂಗಳೂರು : ಡಾ.ರಾಜ್‍ಕುಮಾರ್ ಅವರ ವಿಶೇಷ ಏನೆಂದರೆ, ಜಾತಿ, ಧರ್ಮ, ವರ್ಗ ಎಂಬ ಯಾವುದೇ ಬೇಧ ಇಲ್ಲ. ಎಲ್ಲರೂ ಅವರ ಅಭಿಮಾನಿಗಳೇ, ಜಾತಿ ಧರ್ಮದ ವಿಷಯದಲ್ಲಿ ಅವರೂ ಕೂಡ ಯಾವತ್ತೂ ಸಣ್ಣ ವ್ಯತ್ಯಾಸವನ್ನೂ ಕೂಡ ಮಾಡಿಲ್ಲ. ದೇಶದ ಐಕ್ಯತೆ ವಿಷಯದಲ್ಲಿ ಡಾ.ರಾಜ್‍ಕುಮಾರ್ ಅವರ ಬದ್ಧತೆ, ಅವರ ವ್ಯಕ್ತಿತ್ವ ಮಾದರಿಯಾಗಿದೆ ಎಂದು ಶಾಸಕ ರಿಝ್ವಾನ್ ಅರ್ಶದ್ ತಿಳಿಸಿದ್ದಾರೆ.

ಗುರುವಾರ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುಲೋಚನಾ ಸಭಾಂಗಣದಲ್ಲಿ ವಾರ್ತಾ ಇಲಾಖೆಯ ವತಿಯಿಂದ ಆಯೋಜಸಿದ್ದ ಡಾ.ರಾಜ್‍ಕುಮಾರ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೂರಾರು ಜನರು ಸಿನೆಮಾ ನಟರು ಬಂದಿದ್ದಾರೆ. ಆದರೆ ಡಾ.ರಾಜ್‍ಕುಮಾರ್ ಅವರಿಗೂ ಬೇರೆ ನಟರಿಗೂ ತುಂಬಾ ವ್ಯತ್ಯಾಸವಿದೆ. ನಮಗೆ ಸಂತೋಷ ತರುವ ವಿಷಯ ಏನೆಂದರೆ ಡಾ.ರಾಜ್‍ಕುಮಾರ್ ಅವರು ಕನ್ನಡಿಗರಾಗಿರುವುದು ಎಂದು ಅಭಿಪ್ರಾಯಪಟ್ಟರು.

ಇವತ್ತು ತಂತ್ರಜ್ಞಾನ ಮತ್ತು ಕನ್ನಡ ಸಿನೆಮಾ ಕ್ಷೇತ್ರ ಬೆಳೆದಿರಹುದು. ಆದರೆ ಡಾ.ರಾಜ್‍ಕುಮಾರ್ ಅವರ ಕಾಲದಲ್ಲಿ ಕರ್ನಾಟಕದ ವಿಸ್ತೀರ್ಣ ಇದಕ್ಕಿಂತ ಅರ್ಧ ಭಾಗ ಕೂಡ ಇರಲಿಲ್ಲ. ಸಾಮಾನ್ಯ ಮನೆತನದಲ್ಲಿ ಜನಿಸಿದರೂ ಕೂಡ, ಇಡೀ ಜಗತ್ತಿನಲ್ಲಿ ಡಾ.ರಾಜ್‍ಕುಮಾರ್ ಅವರನ್ನು ಗುರುತಿಸುವ ಜನರು ಇದ್ದಾರೆ ಎನ್ನುವುದು ಆಶ್ಚರ್ಯವಲ್ಲ. ಇವತ್ತಿಗೂ ನಮ್ಮ ನಡುವೆ ಬದುಕಿರುವ ನಾಯಕರೆಂದರೆ ಅವರು ಡಾ.ರಾಜ್‍ಕುಮಾರ್ ಎಂದು ತಿಳಿಸಿದರು.

ಡಾ.ರಾಜ್‍ಕುಮಾರ್ ಅವರು ಸಿನೆಮಾ ನಟ, ಸ್ಟಾರ್ ಎಂದು ತಿಳಿದುಕೊಂಡಿರಲಿಲ್ಲ. ಅವರು ಒಬ್ಬ ಕನ್ನಡಿಗ, ಕನ್ನಡದ ಅಭಿಮಾನಿ, ಕನ್ನಡದ ಕಾರ್ಯಕರ್ತನಾಗಿ ಧ್ವನಿ ಎತ್ತಿದ ನಿದರ್ಶನಗಳು ಇವೆ. ಇವತ್ತು ಕನ್ನಡದ ವಿಷಯ ಬಂದರೆ ಇವತ್ತಿನ ಸಿನೆಮಾ ನಟರು ಯಾರೂ ಕೂಡ ಮುಂದೆ ಬರುವುದಿಲ್ಲ. ಒಂದು ಹೇಳಿಕೆ ಕೊಡುತ್ತಾರೆ. ನಿಜವಾಗಲೂ ಕನ್ನಡ ಇನ್ನೂ ಉಳಿಬೇಕು. ಇನ್ನೂ ಅಭಿವೃದ್ಧಿ ಯಾಗಬೇಕು ಎಂದು ಆಸೆಪಟ್ಟವರು ಡಾ.ರಾಜ್‍ಕುಮಾರ್ ಎಂದು ತಿಳಿಸಿದರು.

ಹಿಂದೆ ಕನ್ನಡ ಸಿನೆಮಾಗಳಿಗೆ ಚಿತ್ರಮಂದಿರಗಳೇ ಸಿಗುತ್ತಿರಲಿಲ್ಲ. ರಾಜ್‍ಕುಮಾರ್ ಜೊತೆ ಅಂದಿನ ಕಲಾವಿದರು ಸೇರಿಕೊಂಡು ಡಬ್ಬಿಂಗ್ ಚಿತ್ರಗಳ ನಿಷೇಧಕ್ಕಾಗಿ ಚಳವಳಿ ಮಾಡಿ, ನಿಷೇಧ ಮಾಡಿಸಿದ ನಂತರ ಕನ್ನಡಚಿತ್ರರಂಗಕ್ಕೆ ಹೊಸ ಜೀವ ಬಂದಾಂತಾಯಿತು ಎಂದು ನೆನಪಿಸಿಕೊಂಡರು.

ಕರ್ನಾಟಕ ಚಲನಚಿತ್ರ ಅಕಾಡಮಿಯ ಅಧ್ಯಕ್ಷ ಸಾಧುಕೋಕಿಲ ಮಾತನಾಡಿ, ನಮಗೆ ಡಾ.ರಾಜ್‍ಕುಮಾರ್ ಅವರ ಸಿನೆಮಾ ಹಾಡುಗಳು ಕೇಳುವುದೇ ಒಂದು ಸಂತೋಷ. ಒಬ್ಬ ನಾಯಕರಾಗಿ ನಮ್ಮ ಭಾಷೆ ಸಂಸ್ಕೃತಿ, ನೆಲ-ಜಲಕ್ಕೆ ದುಡಿದವರು ಡಾ.ರಾಜ್‍ಕುಮಾರ್ ಅವರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ನಟ ರಾಘವೇಂದ್ರ ರಾಜ್‍ಕುಮಾರ್, ನಿರ್ದೇಶಕ ಎಸ್.ನಾರಾಯಣ್, ಕರ್ನಾಟಕ ಮಾದ್ಯಮ ಅಕಾಡಮಿ ಅಧ್ಯಕ್ಷೆ ಆಯೇಷಾ ಖಾನಂ, ಕಂಠೀರವ ಸ್ಟುಡಿಯೋಸ್ ಅಧ್ಯಕ್ಷ ಮೆಹಬೂಬ್ ಪಾಷಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ.ನಿಂಬಾಳ್ಕರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ನರಸಿಂಹಲು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News