ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ | ಸಮಗ್ರ ತನಿಖೆ ನಡೆಸಿ, ಕಾನೂನು ಕ್ರಮ ಜರುಗಿಸಲು ಉಲಮಾಗಳ ಆಗ್ರಹ

Update: 2025-04-24 23:49 IST
ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ | ಸಮಗ್ರ ತನಿಖೆ ನಡೆಸಿ, ಕಾನೂನು ಕ್ರಮ ಜರುಗಿಸಲು ಉಲಮಾಗಳ ಆಗ್ರಹ
  • whatsapp icon

ಬೆಂಗಳೂರು : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ ನಲ್ಲಿ ಎ.22ರಂದು ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಗೆ ಸಂಬಂಧಿಸಿ ಕೇಂದ್ರ ಸರಕಾರ ಸಮಗ್ರ ತನಿಖೆ ನಡೆಸಿ, ಸೂಕ್ತ ಕಾನೂನು ಕ್ರಮ ಜರುಗಿ ಸಬೇಕು ಎಂದು ರಾಜ್ಯದ ಉಲಮಾಗಳು ಮತ್ತು ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ.

ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಜಮೀಯತ್ ಉಲಮಾ-ಎ-ಹಿಂದ್ ರಾಜ್ಯಾಧ್ಯಕ್ಷ ಮುಫ್ತಿ ಇಫ್ತಿಖಾರ್‌ ಅಹ್ಮದ್ ಖಾಸ್ಮಿ ಮಾತನಾಡಿ, ಈ ಭೀಕರ ದಾಳಿಯಿಂದ ದುಃಖಿತರಾಗಿದ್ದೇವೆ. ಈ ಹಿಂಸಾಚಾರದ ಕೃತ್ಯವು ಮುಗ್ಧ ನಾಗರಿಕರ ಮತ್ತು ಯಾವುದೇ ಹಾನಿ ಮಾಡಲು ಉದ್ದೇಶಿಸದ ಪ್ರವಾಸಿಗರ ಜೀವಗಳನ್ನು ಬಲಿ ತೆಗೆದುಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು. 

ಈ ಹತ್ಯೆಗಳು ಕೇವಲ ಅಮಾನವೀಯ ಮಾತ್ರವಲ್ಲ, ಕೋಮು ಸೌಹಾರ್ದವನ್ನು ಕೆರಳಿಸುವ ಮತ್ತು ದೇಶದ ಶಾಂತಿಯನ್ನು ಕದಡುವ ಗುರಿ ಹೊಂದಿವೆ. ಇಸ್ಲಾಮ್ ಧರ್ಮವು ಅಮಾಯಕರನ್ನು ಕೊಲ್ಲುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ. ʼಯಾರಾದರೂ ಅನ್ಯಾಯವಾಗಿ ಒಬ್ಬ ವ್ಯಕ್ತಿಯನ್ನು ಕೊಂದರೆ ಅವನು ಇಡೀ ಮನುಕುಲವನ್ನೇ ಕೊಂದಂತೆ. ಯಾರು ಒಂದು ಜೀವವನ್ನು ಉಳಿಸುತ್ತಾರೋ ಅವನು ಇಡೀ ಮನುಕುಲವನ್ನೇ ರಕ್ಷಿಸಿದಂತೆ' ಎಂದು ಪವಿತ್ರ ಕುರ್ ಆನ್‌ನಲ್ಲಿ ಹೇಳಲಾಗಿದೆ ಎಂದು ಅವರು ತಿಳಿಸಿದರು.

ಸಿಟಿ ಮಾರುಕಟ್ಟೆಯ ಜಾಮಿಯಾ ಮಸೀದಿಯ ಖತೀಬ್  ಇಮಾಮ್ ಮೌಲಾನಾ ಮಕ್ಸೂದ್‌ ಇಮ್ರಾನ್ ರಶಾದಿ ಮಾತನಾಡಿ, 'ಇಸ್ಲಾಮ್ ಧರ್ಮದ ಹೆಸರಿನಲ್ಲಿ ಇಂತಹ ದೌರ್ಜನ್ಯಗಳನ್ನು ಎಸಗುವವರು ಈ ಧರ್ಮದ ನಿಜವಾದ ಬೋಧನೆಗಳ ಅನುಯಾಯಿಗಳಾಗಿರಲು ಸಾಧ್ಯವೇ ಇಲ್ಲ. ಅವರು ಇಸ್ಲಾಮ್ ಧರ್ಮದ ಅರ್ಥಕ್ಕೆ ವಿರುದ್ಧವಾಗಿ ನಿಲ್ಲುತ್ತಿದ್ದಾರೆ. ಯಾವುದೇ ರಾಜಕೀಯ ಅಥವಾ ಸೈದ್ಧಾಂತಿಕ ಕಾರಣವಾಗಲಿ ಇಂತಹ ಅಮಾಯಕರ ಹತ್ಯೆಯನ್ನು ಎಂದಿಗೂ ಸಮರ್ಥಿಸುವುದಿಲ್ಲ. ಶಾಂತಿ, ನ್ಯಾಯ, ಜೀವನದ ಪಾವಿತ್ರ್ಯತೆಯನ್ನು ಎತ್ತಿ ಹಿಡಿಯುವ ಇಸ್ಲಾಮ್ ಧರ್ಮದ ಅನುಯಾಯಿಗಳಾಗಿ ನಾವು ಈ ಹೇಡಿತನದ ಭಯೋತ್ಪಾದನಾ ಕೃತ್ಯವನ್ನು ಖಂಡಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್‌ನ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಸಾದ್ ಬೆಲ್ಗಾಮಿ, ನಾಸೀಹ್ ಫೌಂಡೇಶನ್ ಅಧ್ಯಕ್ಷ ಮೌಲಾನಾ ಸೈಯದ್ ಶಬ್ಬಿರ್ ಅಹ್ಮದ್ ನದ್ವಿ ಮಾತನಾಡಿದರು.

ಜಾಮಿಯಾ ಹಝ್ರತ್ ಬಿಲಾಲ್‍ನ ಖತೀಬ್ ಒ ಇಮಾಮ್ ಖಾರಿ ಝುಲ್ಫಿಖಾರ್ ನೂರಿ, ಜಮಾಅತೆ ಅಹ್ಲೆ ಹದೀಸ್‍ನ ಚಾರ್‍ಮಿನಾರ್ ಮಸೀದಿಯ ಖತೀಬ್ ಒ ಇಮಾಮ್ ಮೌಲಾನಾ ಏಜಾಝ್ ಅಹ್ಮದ್ ನದ್ವಿ, ಮೌಲಾನಾ ಅಬ್ದುಲ್ ಖಾದರ್ ಶಾ ವಾಜಿದ್, ಜೂಲೂಸ್ ಇ ಮುಹಮ್ಮದೀಯದ ಕಾರ್ಯದರ್ಶಿ ಅಫ್ಸರ್ ಬೇಗ್, ಜುಮ್ಮಾ ಮಸೀದಿ ಟ್ರಸ್ಟ್ ಬೋರ್ಡ್ ಕಾರ್ಯದರ್ಶಿ ಉಸ್ಮಾನ್ ಶರೀಫ್ ಸೇರಿದಂತೆ ಇನ್ನಿತರ ಮುಖಂಡರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News