ದಲಿತ ಉದ್ದಿಮೆಗಾರರ ಸಮಸ್ಯೆಗಳ ಶೀಘ್ರವೇ ಪರಿಹರಿಸಿ : ಡಾ.ಎಲ್.ಹನುಮಂತಯ್ಯ

Update: 2025-04-26 00:58 IST
ದಲಿತ ಉದ್ದಿಮೆಗಾರರ ಸಮಸ್ಯೆಗಳ ಶೀಘ್ರವೇ ಪರಿಹರಿಸಿ : ಡಾ.ಎಲ್.ಹನುಮಂತಯ್ಯ
  • whatsapp icon

ಬೆಂಗಳೂರು : ದಲಿತ ಉದ್ಯಮಿಗಳ ಸಮಸ್ಯೆಗಳನ್ನು ರಾಜ್ಯ ಸರಕಾರ ಶೀಘ್ರವೇ ಪರಿಹರಿಸಲು ಮುಂದಾಗಬೇಕು, ಇಲ್ಲದಿದ್ದರೆ ಪ್ರತಿಭಟನಾ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಅಧ್ಯಕ್ಷ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ನಗರದ ಗಾಂಧಿ ಭವನದಲ್ಲಿ ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ವತಿಯಿಂದ ನಡೆದ ದಲಿತ ಉದ್ದಿಮೆದಾರರ ಸಮಾಲೋಚನಾ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸತತ ಹನ್ನೆರಡು ವರ್ಷಗಳಿಂದ ದಲಿತ ಉದ್ದಿಮೆದಾರರು ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಾ ಇಲ್ಲಿವರೆಗಿನ ಸರಕಾರಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇಂದಿಗೂ ದಲಿತ ಉದ್ದಿಮೆದಾರರ ನಿರ್ಲಕ್ಷ್ಯಕ್ಕೊಳಪಡಿಸಲಾಗುತ್ತಿದೆ ಎಂದು ಎಲ್.ಹನುಮಂತಯ್ಯ ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಉದ್ದಿಮೆದಾರರಿಗೆ ಕೈಗಾರಿಕಾ ನಿವೇಶನಗಳ ಹಂಚಿಕೆಯಲ್ಲಿ ಕೆಐಎಡಿಬಿ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಸೇರಿದಂತೆ ತಾತ್ಸಾರ ಮನೋಭಾವ ಅನುಸರಿಸುತ್ತಿದ್ದಾರೆ. ಹೀಗೆ ದಲಿತ ಉದ್ದಿಮೆದಾರರು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಮುಖ್ಯ ಕಾರ್ಯದರ್ಶಿ ಸೇರಿದಂತೆ ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ ಅವರಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹನುಮಂತಯ್ಯ ಅಸಮಾಧಾನ ಹೊರಹಾಕಿದರು.

ಸಂಘದ ಕಾರ್ಯಾಧ್ಯಕ್ಷ ಸಿ.ಜಿ.ಶ್ರೀನಿವಾಸನ್ ಮಾತನಾಡಿ, ರಾಜ್ಯದ ಹಲವಾರು ಕೈಗಾರಿಕಾ ಪ್ರದೇಶಗಳನ್ನು ಒಳಗೊಂಡು ಸಾಕಷ್ಟು ಭಾಗಗಳಲ್ಲಿ ದಲಿತ ಉದ್ದಿಮೆದಾರರು ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸುವಂತಾಗಿದೆ. ಕೆಐಎಡಿಬಿಗೆ ಹಣ ಕಟ್ಟಿದರೂ ದಲಿತ ಉದ್ದಿಮೆದಾರರಿಗೆ ಭೂಮಿ ಮಂಜೂರು ಮಾಡುತ್ತಿಲ್ಲ. ಒಂದು ವೇಳೆ ನಿವೇಶನ ಹಂಚಿಕೆಯಾದರೂ ಕೆಲ ಕಾರಣಗಳನ್ನು ನೀಡಿ ಯೋಜನೆ ಪ್ರಾರಂಭಿಸಲು ಅನುಮತಿ ನೀಡುತ್ತಿಲ್ಲ. ನಿವೇಶನ ಹಂಚಿಕೆಯಾಗಿ, ಯೋಜನೆ ಪೂರ್ಣಗೊಂಡರೂ ಕೆಲ ಕಾರಣಗಳನ್ನು ತೊಂದರೆ ನೀಡುತ್ತಿರುವುದು ನಡೆಯುತ್ತಲೇ ಇದೆ ಎಂದರು.

ಕಾರ್ಯಕ್ರಮದಲ್ಲಿ ಉದ್ದಿಮೆದಾರರ ಸಂಘದ ಡಾ.ಗಣಪತಿ ರಾಥೋಡ್, ಪ್ರಸನ್ನ, ಮೋಹನಾಂಗಯ್ಯ ಸ್ವಾಮಿ, ಚಂದ್ರಶೇಖರ್, ಎನ್.ಚೆನ್ನಕೇಶವ, ಎಸ್.ನಾರಾಯಣಸ್ವಾಮಿ, ಕೆ.ಸೇವಂತ ವಾಸುದೇವ ಉಪಸ್ಥಿತರಿದ್ದರು. ರಾಜ್ಯದ ಹಲವು ಭಾಗಗಳಿಂದ ದಲಿತ ಉದ್ದಿಮೆದಾರರು ತಮ್ಮ ಸಮಸ್ಯೆಗಳನ್ನು ಸಮಾಲೋಚನೆ ವೇಳೆ ಹೇಳಿಕೊಂಡರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News