ʼರೋಹಿತ್ ವೇಮುಲ ಕಾಯ್ದೆ’ ಶಿಕ್ಷಣ ತಜ್ಞರು, ವಿದ್ಯಾರ್ಥಿ, ದಲಿತ ಸಂಘಟನೆಗಳ ಅಭಿಪ್ರಾಯ ಪಡೆಯಲು ಆಗ್ರಹ
ಬೆಂಗಳೂರು: ರೋಹಿತ್ ವೇಮುಲ ಕಾಯ್ದೆಯ ಬಗ್ಗೆ ರಾಜ್ಯದ ವಿದ್ಯಾರ್ಥಿಗಳು, ವಿದ್ಯಾರ್ಥಿ ಸಂಘಟನೆ, ಶಿಕ್ಷಣ ತಜ್ಞರು ಹಾಗೂ ದಲಿತ ಸಂಘಟನೆಗಳ ಅಭಿಪ್ರಾಯ ಪಡೆದುಕೊಳ್ಳಬೇಕು ಎಂದು ರೋಹಿತ್ ಕಾಯ್ದೆಗಾಗಿ ಜನಾಂದೋಲನ ಆಗ್ರಹಿಸಿದೆ.
ಶನಿವಾರ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅವರಿಗೆ ಪತ್ರಬರೆದಿರುವ ರೋಹಿತ್ ಕಾಯ್ದೆಗಾಗಿ ಜನಾಂದೋಲನದ ಹುಲಿಕುಂಟೆ ಮೂರ್ತಿ, ಮೃದುಲ.ವಿ, ಕರ್ನಾಟಕದಲ್ಲಿ ರೋಹಿತ್ ವೇಮುಲ ಕಾಯ್ದೆಯ ಮೊದಲ ಕರಡು ತಯಾರಿಸಿ ರಾಜ್ಯ ಸರಕಾರ ಐತಿಹಾಸಿಕ ಹೆಜ್ಜೆಯಿಟ್ಟಿದ್ದು, ಅಭಿನಂದನೀಯ ಎಂದು ತಿಳಿಸಿದ್ದಾರೆ.
ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳು ಜಾತಿಯ ಕಾರಣಕ್ಕೆ ಹೆಚ್ಚು ತಾರತಮ್ಯ ಹಾಗೂ ಹೆಚ್ಚಿನ ಕಿರುಕುಳವನ್ನೂ ಅನುಭವಿಸುತ್ತಿದ್ದಾರೆ. ಹಾಗಾಗಿ, ಕಾಯ್ದೆಯಲ್ಲಿ ಜಾತಿತಾರತಮ್ಯ ಎದುರಿಸುತ್ತಿರುವ ಪರಿಶಿಷ್ಟಜಾತಿ ಹಾಗು ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ವಿಶೇಷ ನಿಬಂಧನೆಗಳು ರಾಜ್ಯದ ವಿದ್ಯಾರ್ಥಿಗಳ ಮತ್ತು ವಿದ್ಯಾರ್ಥಿ ಸಂಘಟನೆಗಳ, ಶಿಕ್ಷಣ ತಜ್ಞರ, ದಲಿತ ಸಂಘಟನೆಗಳ ಅಭಿಪ್ರಾಯ ಪಡೆದರೆ ರೋಹಿತ್ ವೇಮುಲ ಕಾಯ್ದೆಯ ಕರಡನ್ನು ಇನ್ನಷ್ಟು ಬಲಪಡಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ಕಾಯ್ದೆಯಲ್ಲಿ ದಲಿತ-ಹಿಂದುಳಿದ-ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಳ ರಕ್ಷಣೆ ನೀಡುತ್ತಲೇ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿ ವಿಷೇಶ ನಿಬಂಧನೆಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.