ಮರುಗಣತಿ ಹೆಸರಿನಲ್ಲಿ ಕೋಟ್ಯಂತರ ರೂ. ಅಪವ್ಯಯ ತಡೆಗಟ್ಟಲು ರಾಜ್ಯಪಾಲರಿಗೆ ದೂರು
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಬೆಂಗಳೂರು : ಕಾಂಗ್ರೆಸ್ ಸರಕಾರ ಮತ್ತೆ ಮತ್ತೆ ಜನಗಣತಿ/ಸಮೀಕ್ಷೆಯ ಹೆಸರಿನಲ್ಲಿ ಕೋಟ್ಯಂತರ ರೂ. ಅಪವ್ಯಯ ಮಾಡುತ್ತಿರುವುದು ಮತ್ತು ಅನೇಕ ಆಯೋಗ, ಮಂಡಳಿಗಳಿಗೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅವರೊಬ್ಬರನ್ನೇ ನೇಮಿಸುತ್ತಿರುವುದನ್ನು ತಡೆಯಬೇಕು ಎಂದು ಜನತಾ ಪಕ್ಷದ ವತಿಯಿಂದ ರಾಜ್ಯಪಾಲರಿಗೆ, ರಾಷ್ಟ್ರಪತಿಗೆ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ದೂರು ನೀಡಲಾಗುವುದು ಎಂದು ಎಂ.ಆರ್.ಶಿವರಾಮಯ್ಯ ಹೇಳಿದ್ದಾರೆ.
ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ 2015ರಲ್ಲಿ ಜನಗಣತಿ ನಡೆಸಲು ಕಾಂತರಾಜು ನೇತೃತ್ವದಲ್ಲಿ ಆಯೋಗವನ್ನು ರಚಿಸಿತ್ತು. ಸದರಿ ಆಯೋಗವು ಕೋಟ್ಯಂತರ ರೂ.ಬಳಸಿಕೊಂಡು ತಯಾರಿಸಿದ್ದೆಂದು ಬಿಂಬಿಸಲಾಗಿದ್ದ ವರದಿಯೇ ಕಳೆದು ಹೋಗಿದೆ ಎನ್ನಲಾಗಿದೆ. ಅನಂತರ, ಜಯಪ್ರಕಾಶ್ ಹೆಗ್ಡೆಯವರ ನೇತೃತ್ವದಲ್ಲಿ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಲಾದ ವರದಿಯು ಅವೈಜ್ಞಾನಿಕ ಹಾಗೂ ಅಸಂಬದ್ಧವಾಗಿರುವುದು ಸರಕಾರದ ಬೇಜವಾಬ್ದಾರಿಯನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಹುಜನರು ಹೇಳುವಂತೆ 2015 ರಿಂದ ಜನಗಣತಿ ಅಥವಾ ಸಮೀಕ್ಷೆಯ ಹೆಸರಿನಲ್ಲಿ ನಮ್ಮ ಮನೆಗಳಿಗೆ ಯಾರೂ ಬಂದಿಲ್ಲ. ಅದೊಂದು ಅವೈಜ್ಞಾನಿಕ ಮತ್ತು ಕಪೋಲಕಲ್ಪಿತವಾಗಿ ಆಡಳಿತಗಾರರನ್ನು ಮೆಚ್ಚಿಸಲು ತಯಾರಿಸಿದ ಸಿದ್ಧವರದಿ. ವರದಿ ಸೋರಿಕೆಯ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ವ್ಯಕ್ತವಾದ ಆಕ್ಷೇಪಣೆ, ಪ್ರತಿರೋಧದಿಂದ ಕಂಗೆಟ್ಟ ಸಿದ್ಧರಾಮಯ್ಯ ಮತ್ತು ಮಂತ್ರಿಮಂಡಲದ ಸಚಿವರು ಅದೊಂದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯೇ ಹೊರತು, ನಾವು ನಡೆಸಿದ್ದು ಜನಗಣತಿಯಲ್ಲ ಎಂಬುದಾಗಿ ಬೇಜವಾಬ್ದಾರಿಯುತ ಸಮಜಾಯಿಷಿಗಳನ್ನು ನೀಡುತ್ತಿದ್ದಾರೆ ಎಂದು ಶಿವರಾಮಯ್ಯ ತಿಳಿಸಿದರು.
ಮಹಾಪ್ರಧಾನ ಕಾರ್ಯದರ್ಶಿ ನಾಗೇಶ್ ಎನ್. ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಜನತಾಪಕ್ಷದ ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷೆ ಡಾ.ವಾಣಿ ಎನ್.ಶೆಟ್ಟಿ, ರಾಷ್ಟ್ರೀಯ ಮುಖಂಡ ಶ್ರೀನಿವಾಸ್, ರಾಜ್ಯ ಕಾರ್ಯಾಧ್ಯಕ್ಷ ಮಾದೇಗೌಡ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಿಯಾಝ್ ಅಹ್ಮದ್, ರಾಜ್ಯ ರೈತ ಘಟಕದ ಅಧ್ಯಕ್ಷ ಭೈರೇಗೌಡ, ನಗರ ಘಟಕದ ಅಧ್ಯಕ್ಷ ಎ.ರಾಜು ಉಪಸ್ಥಿತರಿದ್ದರು.