ʼಸ್ಪಾರ್‌ಎಕ್ಸ್’ ಮೂಲಕ ಜಪಾನಿನಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಹೊಸ ಕಲಿಕಾ ಅನುಭವ

ಬೆಂಗಳೂರು : ಮಕ್ಕಳಲ್ಲಿ ಜಾಗತಿಕ ಮಟ್ಟದ ಉದ್ಯಮದ ಮನೋಭಾವ ಮೂಡಿಸಲು ಲರ್ನ್ ಎನ್ ಇನ್‌ಸ್ಪಯರ್ (ಐಓ) ಹಾಗೂ ನಿಶ್ಚಲ್ಸ್ ಸ್ಮಾರ್ಟ್ ಲರ್ನಿಂಗ್ ಸೊಲ್ಯೂಷನ್ಸ್ ಸಹಯೋಗದಲ್ಲಿ ‘ಸ್ಪಾರ್ ಎಕ್ಸ್’ ಯೋಜನೆ ಮೂಲಕ ಬೆಂಗಳೂರಿನ ಆರು ಶಾಲೆಗಳು ಸೇರಿದಂತೆ ದೇಶದ ಒಟ್ಟು 9 ಪ್ರತಿಷ್ಠಿತ ಶಾಲೆಗಳ 32 ವಿದ್ಯಾರ್ಥಿಗಳು ಜಪಾನಿಗೆ ಕಲಿಕಾ ಪ್ರವಾಸ ಕೈಗೊಳ್ಳಲಿದ್ದಾರೆ.
ಪೂರ್ಣ ಪ್ರಮಾಣದ ಪ್ರಾಯೋಜಿತ ಯೋಜನೆ ಇದಾಗಿದ್ದು, ನ್ಯಾಷನಲ್ ಹಿಲ್ ವ್ಯೆ ಪಬ್ಲಿಕ್ ಶಾಲೆ, ಅಪೋಲೊ ನ್ಯಾಷನಲ್ ಪಬ್ಲಿಕ್ ಶಾಲೆ, ಅಂಬರ್ ವ್ಯಾಲಿ ರೆಸಿಡೆನ್ಸಿಯಲ್ ಶಾಲೆ, ಶಾರದಾ ವಿದ್ಯಾ ನಿಕೇತನ್, ಡಿಪಿಎಸ್, ಸರ್ವಪಲ್ಲಿ ವಿದ್ಯಾನಿಲಯಂ ಹೈಸ್ಕೂಲ್‌ನ 21 ವಿದ್ಯಾರ್ಥಿಗಳು ಈ ಪ್ರವಾಸದಲ್ಲಿ ಉದ್ಯಮಶೀಲತೆಯ ಮೊದಲ ಹಂತದ ಕಲಿಕೆಗೆ ಆಯ್ಕೆಯಾಗಿದ್ದಾರೆ.
ಸ್ಪಾರ್ ಎಕ್ಸ್ ಯೋಜನೆ ಲರ್ನ್ ಎನ್ ಇನ್‌ಸ್ಪಯರ್ ಮಹತ್ವದ ಯೋಜನೆಯಾಗಿದೆ. ಮಕ್ಕಳ ಮನಸ್ಸಿನಲ್ಲಿ ಉದ್ಯಮಶೀಲತೆ, ತೀಕ್ಷ್ಣ ಆಲೋಚನೆ, ಆರ್ಥಿಕ ಸಾಕ್ಷರತೆ ಹಾಗೂ ಆವಿಷ್ಕಾರ ಮನಸ್ಥಿತಿ ಮೂಡಿಸುವುದು ಇದರ ಉದ್ದೇಶ. 5 ದಿನಗಳ ಈ ಕಲಿಕಾ ಪ್ರವಾಸವು ಸಾಂಸ್ಕೃತಿಕ ಕಲಿಕೆ, ಜಪಾನಿನ ನವೊದ್ಯಮಗಳ ಜತೆ ಚರ್ಚೆ, ಕ್ಯೋಟೋ ಹಾಗೂ ಒಸಾಕಾದಲ್ಲಿರುವ ಪಾರಂಪರಿಕ ಸ್ಥಳಗಳಿಗೆ ಭೇಟಿಯನ್ನು ಒಳಗೊಂಡಿದೆ.
ಈ ಕಲಿಕಾ ಪ್ರವಾಸದ ಬಗ್ಗೆ ಸಂತೋಷ ವ್ಯಕ್ತಪಡಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಇದು ಕರ್ನಾಟಕದ ಪಾಲಿಗೆ ಹೆಮ್ಮೆಯ ವಿಚಾರ. ಈ 21 ಮಂದಿ ವಿದ್ಯಾರ್ಥಿಗಳು ಕೇವಲ ನಮ್ಮ ರಾಜ್ಯವನ್ನು ಮಾತ್ರ ಪ್ರತಿನಿಧಿಸುತ್ತಿಲ್ಲ. ಇಡೀ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಈ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹ ಹಾಗೂ ಕುತೂಹಲದಿಂದ ಈ ಪ್ರವಾಸವನ್ನು ಅನುಭವಿಸಲಿ ಎಂದು ಶುಭ ಕೋರುತ್ತೇನೆ ಎಂದು ತಿಳಿಸಿದರು.
ಉದ್ಯಮಿ ಐಶ್ವರ್ಯ ಡಿಕೆಎಸ್ ಹೆಗಡೆ ಮಾತನಾಡಿ, ಶಿಕ್ಷಣವು ವಿದ್ಯಾರ್ಥಿಗಳನ್ನು ತರಗತಿಯಾಚೆಗಿನ ಪ್ರಪಂಚದಲ್ಲಿ ಅರ್ಥಪೂರ್ಣವಾಗಿ ಬೆರೆಯುವಂತೆ ಮಾಡಬೇಕು ಎಂಬುದನ್ನು ನಾವು ನಂಬಿದ್ದೇವೆ. ನಾನು ಮುನ್ನಡೆಸುತ್ತಿರುವ ಶಾಲೆಗಳ ಅನೇಕ ಮಕ್ಕಳು ಈ ಪ್ರತಿಷ್ಠಿತ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ. ಮಕ್ಕಳಲ್ಲಿ ಆತ್ಮವಿಶ್ವಾಸ, ಸಾಂಸ್ಕೃತಿಕ ಅರಿವು, ಅಂತರ್ ರಾಷ್ಟ್ರೀಯ ಮಟ್ಟದ ವೇದಿಕೆ ಎದುರಿಸಲು ತಯಾರಿ ಮಾಡುವ ನಮ್ಮ ಬದ್ಧತೆಗೆ ಇದು ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಎಲ್‌ಐಎನ್ ಮುಖ್ಯಸ್ಥರು ಹಾಗೂ ಸಂಸ್ಥಾಪಕ ಕಲ್ಯಾಣ್ ಹಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯಕ್ರಮದ ಹೊರತಾಗಿ ಆಲೋಚಿಸಲು, ಭವಿಷ್ಯದ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಲು ಪ್ರೋತ್ಸಾಹ ನೀಡುವ ಮೂಲಕ ಭಾರತಕ್ಕೆ ಮತ್ತೆ ಚಿನ್ನದ ಹಕ್ಕಿ ಎಂಬ ಹಿರಿಮೆ ಗಳಿಸುವ ಕಲ್ಪನೆ ನಮ್ಮದಾಗಿದೆ. ಈ ಕಾರ್ಯಕ್ರಮದ ಮೂಲಕ ನಾವು ವಿಕಸಿತ ಭಾರತಕ್ಕೆ ಹೂಡಿಕೆ ಮಾಡುತ್ತಿದ್ದೇವೆ ಎಂದು ಹೇಳಿದರು.