ಹಿಂದೂ ಧಾರ್ಮಿಕ ಸಂಸ್ಥೆ, ಕೇಂದ್ರಗಳ ಆಸ್ತಿ ಏಕೆ ಬಹಿರಂಗಪಡಿಸುತ್ತಿಲ್ಲ? : ಪ್ರೊ.ರವಿವರ್ಮ ಕುಮಾರ್
ಬೆಂಗಳೂರು : ಸರಕಾರಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವಕ್ಫ್ ಆಸ್ತಿಯನ್ನು ಮಾತ್ರ ಬಹಿರಂಗಪಡಿಸುತ್ತಿವೆ. ಆದರೆ, ಬಹುಸಂಖ್ಯಾತ ಹಿಂದೂ ದೇವಾಲಯ, ಧಾರ್ಮಿಕ ಸಂಸ್ಥೆ, ಧಾರ್ಮಿಕ ಕೇಂದ್ರಗಳ ಆಸ್ತಿ ವಿವರಗಳನ್ನು ಏಕೆ ಬಹಿರಂಗಪಡಿಸುತ್ತಿಲ್ಲ ಎಂದು ಮಾಜಿ ಅಡ್ವಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಪ್ರಶ್ನಿಸಿದ್ದಾರೆ.
ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ ಆಯೋಜಿಸಿದ್ದ ‘ವಕ್ಫ್ ಕಾನೂನು’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರವು ರೂಪಿಸಿರುವ ವಕ್ಫ್ ತಿದ್ದುಪಡಿ ಬಿಲ್‌ನಲ್ಲಿ ಮುಸ್ಲಿಮೇತರರು ವಕ್ಫ್ ಬೋರ್ಡ್‌ನ ಸದಸ್ಯರಾಗಲು ಅವಕಾಶ ನೀಡಲಾಗಿದೆ. ಇದು ಸಂವಿಧಾನವು ನೀಡಿದ ಧಾರ್ಮಿಕ ಸ್ವಾತಂತ್ರ್ಯ ಹಕ್ಕಿನ ಉಲ್ಲಂಘನೆಯಾಗುತ್ತದೆ. ಅಲ್ಲದೆ ವಕ್ಫ್ ತಿದ್ದುಪಡಿ ಮಸೂದೆಯನ್ನು ಸಂಸತ್‌ನಲ್ಲಿ ಮಧ್ಯರಾತ್ರಿಯವರೆಗೆ ಮಂಡಿಸಿರುವುದೇ ಅಚ್ಚರಿಯಾಗಿದೆ ಎಂದು ಅವರು ತಿಳಿಸಿದರು.
ಭಾರತೀಯ ಮುಸ್ಲಿಮ್ ಮಹಿಳಾ ಆಂದೋಲನದ ಸಂಸ್ಥಾಪಕಿ ಝಾಕಿಯಾ ಸೋಮನ್ ಮಾತನಾಡಿ, ಉತ್ತರ ಪ್ರದೇಶದಂತಹ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ತಮ್ಮ ಪಾಡಿಗೆ ನಮಾಝ್ ಮಾಡುತ್ತಿದ್ದ ಮುಸ್ಲಿಮರನ್ನು ಬಂಧಿಸಲಾಗುತ್ತಿದೆ. ಯಾವುದೇ ಭೀತಿಯಿಲ್ಲದೆ ಮುಕ್ತವಾಗಿ ದ್ವೇಷದ ಭಾಷಣಗಳನ್ನು ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ವಕ್ಫ್ ತಿದ್ದುಪಡಿ ಬಿಲ್ ಅನ್ನು ಮಂಡಿಸಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.