ಕಾಂಗ್ರೆಸ್ ಬಿಡುಗಡೆ ಮಾಡಿದ ವಿಡಿಯೋಕ್ಕೆ ಯಾವುದೇ ಆಧಾರ ಇಲ್ಲ : ಎನ್.ರವಿಕುಮಾರ್
ಬೆಂಗಳೂರು : ಕಾಂಗ್ರೆಸ್ಸಿನವರು ಬಿಡುಗಡೆ ಮಾಡಿದ ವಿಡಿಯೋಕ್ಕೆ ಯಾವುದೇ ಬೆಲೆ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದ್ದಾರೆ.
ಸೋಮವಾರ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸಭಾಪತಿ ಬಸವರಾಜ ಹೊರಟ್ಟಿ ಈಗಾಗಲೇ ಸ್ಪಷ್ಟನೆ ನೀಡಿದ್ದು, ಆ ರೀತಿಯ ವಿಡಿಯೋ ದಾಖಲೆ ನಮ್ಮ ಬಳಿ ಇಲ್ಲ ಎಂದಿದ್ದಾರೆ. ಬೈದಿರುವ ಅಥವಾ ಅಂತಹ ಮಾತನಾಡಿದ ವಿಡಿಯೋ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇವರು ಬಿಡುಗಡೆ ಮಾಡುವ ವಿಡಿಯೋಗೆ ಯಾವುದೇ ಆಧಾರ ಇಲ್ಲ, ಬೆಲೆಯೂ ಇಲ್ಲ ಎಂದು ತಿಳಿಸಿದರು.
ಹೊರಟ್ಟಿ ಹೇಳಿದ್ದಕ್ಕೆ ಮಾತ್ರ ಬೆಲೆ ಇದೆ. ಹೈಕೋರ್ಟ್ ಕೂಡಲೇ ಸಿ.ಟಿ.ರವಿಯನ್ನು ಬಿಡುಗಡೆ ಮಾಡಲು ಹೇಳಿರುವುದರಲ್ಲಿ ನಮಗೆ ಅರ್ಧ ಜಯ ಲಭಿಸಿದೆ. ಸಿ.ಟಿ.ರವಿ ಅವರನ್ನು ಇಷ್ಟೆಲ್ಲ ಓಡಾಡಿಸಿದ್ದು ಯಾಕೆ? ಕಾಡಿನಲ್ಲಿ, ಕಬ್ಬಿನ ಗದ್ದೆಯಲ್ಲಿ, ಧಾರವಾಡ, ಗದಗ, ಚಿಕ್ಕೋಡಿ ಜಿಲ್ಲೆ, ಬಾಗಲಕೋಟೆ ಜಿಲ್ಲೆ ಗಡಿಭಾಗ, ಈ ಥರ ನಾಲ್ಕೈದು ಜಿಲ್ಲೆಗಳಲ್ಲಿ ಕರೆದುಕೊಂಡು ಹೋಗಿ ರಾತ್ರಿಯೆಲ್ಲ ಊಟ, ನೀರು ನೀಡದೆ, ನಿದ್ದೆ ಇಲ್ಲದಂತೆ ಚಿತ್ರಹಿಂಸೆ ಕೊಟ್ಟಿದ್ದಾರೆ. ತಲೆಗೆ ಪೆಟ್ಟಾದರೂ ಚಿಕಿತ್ಸೆ ನೀಡಿಲ್ಲ ಎಂದು ದೂರಿದರು.
ಸಿ.ಟಿ.ರವಿ ಮೇಲೆ ಹಲ್ಲೆ ಮಾಡಲು ನೂರಾರು ಜನರು ಸುವರ್ಣ ವಿಧಾನಸೌಧದ ಒಳಗೆ ಹೇಗೆ ಬಂದರು. ಒಳಗಡೆ ಬರಲು ಕಾರಣ ಯಾರು. ಯಾರ ಪತ್ರದೊಂದಿಗೆ ಒಳಗಡೆ ಬಂದಿದ್ದಾರೆ ಎಂದು ಅವರು ಪ್ರಶ್ನಿಸಿದರು.