ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಕೇಸ್‌ | ಪ್ರಕರಣ ವರ್ಗಾವಣೆ ಕೋರಿದ್ದ ಮನವಿ ತಿರಸ್ಕಾರ

Update: 2025-04-25 00:02 IST
ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಕೇಸ್‌ | ಪ್ರಕರಣ ವರ್ಗಾವಣೆ ಕೋರಿದ್ದ ಮನವಿ ತಿರಸ್ಕಾರ

ಪ್ರಜ್ವಲ್ ರೇವಣ್ಣ

  • whatsapp icon

ಬೆಂಗಳೂರು : ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ಪೂರ್ವಾಗ್ರಹ ಪೀಡಿತರಾಗಿದ್ದು, ಬೇರೊಂದು ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾವಣೆ ಮಾಡುವಂತೆ ಕೋರಿ ಪ್ರಜ್ವಲ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಪ್ರಧಾನ ಜಿಲ್ಲಾ ನ್ಯಾಯಾಧೀಶರು ತಿರಸ್ಕರಿಸಿದ್ದಾರೆ.

ಪ್ರಜ್ವಲ್ ಪರ ವಕೀಲರು ಅರ್ಜಿ ಸಲ್ಲಿಸಿ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ನ್ಯಾಯ ದೊರೆಯುತ್ತದೆ ಎಂಬ ನಂಬಿಕೆ ಇಲ್ಲ. ನ್ಯಾಯಾಧೀಶರು ಪ್ರಕರಣದಲ್ಲಿ ಆರೋಪಿ ವಿರುದ್ಧ ಪೂರ್ವಾಗ್ರಹ ಪೀಡಿತ ಭಾವನೆ ಹೊಂದಿದ್ದಾರೆ. ನ್ಯಾಯಸಮ್ಮತ ವಿಚಾರಣೆ ನಡೆಸುವ ಬಗ್ಗೆ ವಿಶ್ವಾಸ ಇಲ್ಲದಂತಾಗಿದೆ ಎಂದು ಆರೋಪಿಸಿದ್ದರು.

ಪ್ರಜ್ವಲ್ ಪರ ಹೈಕೋರ್ಟ್ ವಕೀಲ ಜಿ.ಅರುಣ್ ಅವರು, ಪ್ರಕರಣದ ವಿಚಾರಣೆ ನಡೆಸುತ್ತಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಮುಂದೆ ಮೆಮೊ ಸಲ್ಲಿಸಿದ್ದರು. ವಿಚಾರಣೆ ಆರಂಭ ಆಗುತ್ತಿದ್ದಂತೆ ವಕೀಲ ಅರುಣ್, ಆರು ಪುಟಗಳು ಮೆಮೊ ಅನ್ನು ನ್ಯಾಯಾಧೀಶರಿಗೆ ಸಲ್ಲಿಸಿದರು. ಆದರೆ, ಇದಕ್ಕೆ ಪ್ರಾಸಿಕ್ಯೂಷನ್ ಪರ ಹಾಜರಿದ್ದ ವಿಶೇಷ ಸರಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಮತ್ತು ವಿಶೇಷ ಅಭಿಯೋಜಕ ಅಶೋಕ್ ಎನ್. ನಾಯಕ್ ಅವರು, ಅರ್ಜಿದಾರರು ಜನವರಿ 16ರಿಂದ ಒಂದಲ್ಲಾ ಒಂದು ಕಾರಣಕ್ಕೆ ವಿಚಾರಣೆಯನ್ನು ವಿಳಂಬಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತೀವ್ರ ವಿರೋಧ ವ್ಯಕ್ತಪಡಿಸಿದರು.

ಆರೋಪಿ ಪರ ವಕೀಲರ ಕೋರಿಕೆಯಂತೆ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ಮೆಮೊ ಅನ್ನು ಪ್ರಧಾನ ಜಿಲ್ಲಾ ನ್ಯಾಯಾಧೀಶರ ಅವಗಾಹನೆಗೆ ಕಳುಹಿಸಿ ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಿದರು.

ಮಧ್ಯಾಹ್ನ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಅರ್ಜಿ ಪುರಸ್ಕರಿಸಲು ನಿರಾಕರಿಸಿದ ಕಾರಣ ಅರುಣ್, ಅರ್ಜಿದಾರರ ಪರ ವಕಾಲತಿನಿಂದ ತಾವು ನಿವೃತ್ತಿ ಆಗುತ್ತಿರುವುದಾಗಿ ಘೋಷಿಸಿ ನ್ಯಾಯಾಧೀಶರಿಗೆ ಮೆಮೊ ಸಲ್ಲಿಸಿದರು. ಇದರಿಂದಾಗಿ ನ್ಯಾಯಾಧೀಶ ಸಂತೋಷ ಗಜಾನನ ಭಟ್ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News