ಮುಜರಾಯಿ ಜಮೀನನ್ನು ಖಾಸಗಿಯವರು ಮಾರಾಟಕ್ಕೆ ಅವಕಾಶವಿಲ್ಲ: ಸಚಿವ ರಾಮಲಿಂಗಾರೆಡ್ಡಿ

ರಾಮಲಿಂಗಾರೆಡ್ಡಿ
ಬೆಂಗಳೂರು : ಮುಜರಾಯಿ ದೇವಸ್ಥಾನಕ್ಕೆ ಸೇರಿದ ಜಮೀನನ್ನು ಖಾಸಗಿಯವರು ಮಾರಾಟ ಮಾಡಲು ಅವಕಾಶ ಇರುವುದಿಲ್ಲ ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಬುಧವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಟಿ.ಎನ್. ಜವರಾಯಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಮುಜರಾಯಿ ದೇವಸ್ಥಾನದ ಜಮೀನನ್ನು ಖಾಸಗಿಯವರು ಮಾರಾಟ ಮಾಡಲು ಅವಕಾಶ ಇರುವುದಿಲ್ಲ ಹಾಗೂ ಇಂತಹ ಪ್ರಕರಣಗಳು ವರದಿಯಾಗಿರುವುದಿಲ್ಲ ಎಂದರು.
ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳು ಹೊಂದಿರುವ ಸ್ಥಿರಾಸ್ತಿಯನ್ನು ಸಂಬಂಧಿಸಿದ ದೇವರ ಹೆಸರಿಗೆ ಪಹಣಿ ಮಾಡಲು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾದ ಅಧಿಸೂಚಿತ ದೇವಾಲಯಗಳ ಪಟ್ಟಿಯಲ್ಲಿರುವ ದೇವಾಲಯ/ಸಂಸ್ಥೆಯ ಹೆಸರನ್ನು ಮ್ಯೂಟೇಷನ್ ಮತ್ತು ಆರ್.ಟಿ.ಸಿ.ಯಲ್ಲಿ ನಮೂದಿಸುವಾಗ ‘ದೇವಸ್ಥಾನ ಹೆಸರು’ ಮತ್ತು ‘ಧಾರ್ಮಿಕ ದತ್ತಿ ಇಲಾಖೆ’ ಮತ್ತು ‘ಕರ್ನಾಟಕ ಸರಕಾರ’ ಎಂದು ನಮೂದಿಸಲು ಸರಕಾರ ಸೂಚಿಸಿದ್ದು, ಈಗಾಗಲೇ ನಮೂದಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಒಂದು ಬಾರಿ ದೇವಸ್ಥಾನದ ಭೂಮಿ ಎಂದು ಪರಿಗಣಿಸಿದ ಬಳಿಕ ಅದು ಯಾವುದೇ ಕಾಲದಲ್ಲೂ, ದೇವಸ್ಥಾನದ ಭೂಮಿಯೇ ಆಗಿರುವಂತೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಅಧಿಸೂಚಿತ ದೇವಾಲಯಗಳ ಜಮೀನುಗಳನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮದಂತೆ ಅಧಿಸೂಚನೆ ಹೊರಡಿಸಲು ಕ್ರಮ ವಹಿಸಲಾಗಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.