ದಲಿತರ ಮೇಲಿನ ದೌರ್ಜನ್ಯಗಳನ್ನು ಅಭಿವ್ಯಕ್ತಿಸುವ ಸಾಹಿತ್ಯ ಅಗತ್ಯ: ಪ್ರೊ.ಬರಗೂರು ರಾಮಚಂದ್ರಪ್ಪ

ಬೆಂಗಳೂರು : ವರ್ತಮಾನದಲ್ಲಿ ದಲಿತರ ಮೇಲಿನ ದೌರ್ಜನ್ಯಗಳನ್ನು ಪ್ರತಿರೋಧಿಸುವ ಚಳವಳಿಗಳು ಹಾಗೂ ಅಭಿವ್ಯಕ್ತಿಸುವ ಸಾಹಿತ್ಯದ ಅಗತ್ಯವಿದೆ ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.
ಮಂಗಳವಾರ ನಗರದ ಕನ್ನಡ ಭವನದಲ್ಲಿರುವ ನಯನ ಸಭಾಂಗಣದಲ್ಲಿ ದಲಿತ ಸಾಹಿತ್ಯ ಪರಿಷತ್ತು, ಬೆಂಗಳೂರು ಘಟಕದ ವತಿಯಿಂದ ನಡೆದ ಜಿಲ್ಲಾಮಟ್ಟದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇವತ್ತಿಗೂ ದಲಿತರ ಮೇಲಿನ ದೌರ್ಜನ್ಯಗಳು ಕಡಿಮೆಯಾಗಿಲ್ಲ. ಮಹಿಳೆಯರ ಅತ್ಯಾಚಾರಗಳೂ ಕ್ಷೀಣಿಸಿಲ್ಲ. ಇದಕ್ಕೆ ತಕ್ಕ ನ್ಯಾಯ ಸಿಗುತ್ತಿಲ್ಲ ಎಂಬುದು ನೋವಿನ ಸಂಗತಿ ಎಂದರು.
ಈ ಹಿಂದೆ ಇದ್ದಂತಹ ದಲಿತ ಚಳವಳಿಗಳು, ಹೋರಾಟಗಳು ಈಗ ಒಡೆದು ಓಳಾಗಿವೆ. ಆದ್ದರಿಂದ ಸರಿಯಾದ ಪ್ರತಿರೋಧ, ಖಂಡನೆ ದೊರೆಯುತ್ತಿಲ್ಲ. ದಲಿತ ಚಳವಳಿಗಳಲ್ಲಿ ತಾತ್ವಿಕತೆ ಬರಬೇಕು, ಆಗ ಮಾತ್ರ ಹೋರಾಟ ಫಲ ಕಾಣಲು ಸಾಧ್ಯ. ಅಂಬೇಡ್ಕರ್ ಹೇಳಿದ ಸಹೋದರತ್ವ ಪರಿಕಲ್ಪನೆ ಇವತ್ತಿನ ದಲಿತ ಚಳವಳಿ, ಹೋರಾಟಗಳಲ್ಲಿ ಒಳಗೊಳ್ಳಬೇಕು. ಹೀಗಿದ್ದಾಗ ಬಂಡವಾಳಶಾಹಿ, ಪುರೋಹಿತಶಾಹಿ ಜಾಗೃತಗೊಂಡಿರುವ ಈ ಸನ್ನಿವೇಶದಲ್ಲಿ ಸಂಘಟಿತ ಪ್ರತಿರೋಧ ಸಾಧ್ಯವಾಗುತ್ತದೆ ಎಂದು ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು.
ಅಸ್ಪೃಶ್ಯರಿಗೆ ಆದ ಅನುಭವ ಯಾವುದೇ ತಳ ಸಮುದಾಯಗಳಿಗೆ ಆಗಿಲ್ಲ. ಅರಿವಿನಿಂದ ಅಸ್ಪೃಶ್ಯತೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೂ, ಅನುಭವದಿಂದ ಅಸ್ಪೃಶ್ಯತೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೂ ಬಹಳ ವ್ಯತ್ಯಾಸವಿದೆ. ಹಾಗಾಗಿ ಅನುಭವ ಮತ್ತು ಅರಿವು ಇವೆರಡೂ ಸೇರಿ ಒಂದು ಸಂಘಟಿತ ಹೋರಾಟವನ್ನು ಕಟ್ಟಬೇಕಾಗಿದೆ ಎಂದು ಪ್ರೊ.ಬರಗೂರು ರಾಮಚಂದ್ರಪ್ಪ ಸಲಹೆ ನೀಡಿದರು.
ಏಕ ಭಾರತವು ಬಹುತ್ವ ಭಾರತವನ್ನು ಕೊಲ್ಲುತ್ತಿದೆ..!
ಬಂಡವಾಳಶಾಹಿ ಮತ್ತು ಬ್ರಾಹ್ಮಣಶಾಹಿ ಇವೆರಡೂ ದೇಶವನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದೆ. ಇಂದು ದಲಿತರ ದೌರ್ಜನ್ಯ, ಹತ್ಯಾಕಾಂಡಗಳಿಗೂ ಸಿಗದಷ್ಟು ಪ್ರಚಾರ, ಪ್ರಾಮುಖ್ಯತೆ ಜನಿವಾರಕ್ಕೆ ಸಿಗುತ್ತಿರುವುದು ದುರಂತ. ಬಹುತ್ವದ ಪರಿಕಲ್ಪನೆಯ ಭಾರತವನ್ನು ಏಕ ಭಾರತವು ಕೊಲ್ಲುತ್ತಿದೆ. ಈ ನಿಟ್ಟಿನಲ್ಲಿ ನಾವು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ದಲಿತ ಹೋರಾಟಗಾರ ಮಾವಳ್ಳಿ ಶಂಕರ್ ತಿಳಿಸಿದರು.