“ಯುದ್ಧ ಪರವಾಗಿರುವ ಇಸ್ರೇಲ್‍ಗೆ ಭಾರತ ಕಡಿವಾಣ ಹಾಕಲಿ": ಬೆಂಗಳೂರಿನಲ್ಲಿ ಸರ್ವಧರ್ಮಗಳ ಗುರುಗಳ ಕರೆ
ಬೆಂಗಳೂರು: ಯುದ್ಧದ ಪರವಾಗಿ ಮಾತ್ರವಲ್ಲದೆ, ಮಾನವೀಯತೆ ವಿರೋಧಿಯಾಗಿರುವ ಇಸ್ರೇಲ್ ಜತೆಗೆ ಭಾರತವೂ ಎಲ್ಲ ಸಂಬಂಧಗಳಿಗೆ ಕಡಿವಾಣ ಹಾಕಬೇಕು.ಜತೆಗೆ, ಫೆಲೆಸ್ತೀನ್ ನೆರವಿಗೆ ಧಾವಿಸಬೇಕು ಎಂದು ಸರ್ವಧರ್ಮಗಳ ಗುರುಗಳು ಕರೆ ನೀಡಿದರು.
ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆಯ ಪ್ರಯುಕ್ತ ‘ಫೆಲೆಸ್ತೀನ್‍ಗಾಗಿ ಧರ್ಮಗಳನ್ನು ಬೆಸೆಯುವುದು’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿವಿಧ ಧರ್ಮಗಳ ಗುರುಗಳು, ಫೆಲೆಸ್ತೀನ್ ಪರ ಕೇಂದ್ರ ಸರಕಾರ ಗಟ್ಟಿಯಾಗಿ ನಿಲ್ಲಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಎಂದು ಗುರು ಬಸವಶ್ರೀ ಸ್ವಾಮೀಜಿ, ಭಾರತ ಇಡೀ ಜಗತ್ತಿಗೆ ಶಾಂತಿಯ ಸಂದೇಶವನ್ನು ನೀಡಿದೆ. ಯುದ್ಧಕ್ಕೆ ಪರಿಹಾರ ಶಾಂತಿಯಾಗಿದೆ. ಬುದ್ಧ ಯುದ್ಧವನ್ನು ಬಿಟ್ಟು ಶಾಂತಿ ಮಾರ್ಗವನ್ನು ತೋರಿದರು. ಬಸವಣ್ಣ ಅವರು, ಬುದ್ಧನ ದಾರಿಯಲ್ಲಿ ಭಕ್ತಿ ಮತ್ತು ಶಾಂತಿ ಮಾರ್ಗದಲ್ಲಿ ನಡೆದರು. ಗಾಂಧೀ ನೇತೃತ್ವದಲ್ಲಿ ಭಾರತಕ್ಕೆ ಶಾಂತಿಯಿಂದ ಸ್ವಾತಂತ್ರ್ಯ ಸಿಕ್ಕಿತು ಎಂದು ತಿಳಿಸಿದರು.
ಎಲ್ಲಕ್ಕಿಂತ ಮುಖ್ಯವಾದ್ದು ಮಾನವ ಸಂಪನ್ಮೂಲ ಅದು ಸಮೃದ್ಧವಾಗಲು ಪ್ರೇಮ, ಪ್ರೀತಿಯೇ ಮುಖ್ಯವಾಗುತ್ತದೆ. ಯುದ್ಧಕ್ಕೆ ಯುದ್ಧವೇ ಪರಿಹಾರ ಅಲ್ಲ. ಶಾಂತಿ ಮತ್ತು ಪ್ರೀತಿ ಪರಿಹಾರ ಎಂದು ಅಭಿಪ್ರಾಯಪಟ್ಟರು.
ಬೌದ್ಧ ಭಿಕ್ಕು ಭಂತೇತಾಶಿ ಮಾತನಾಡಿ, ನಾವು ಜೀವಿಗಳು ಯಾವುದೇ ಜೀವಿಗಳನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ಎಲ್ಲರ ಜತೆಯಲ್ಲಿ ಬದಕಬೇಕು. ಧರ್ಮದ ಮುಖ್ಯ ಜವಾಬ್ದಾರಿ ಯುದ್ಧವನ್ನು ನಿಲ್ಲಿಸುವುದು, ಶಾಂತಿಯನ್ನು ಕಟ್ಟವುದು, ಧರ್ಮದ ಜವಾಬ್ದಾರಿ ಯಾಗಿದೆ. ಆ ರೀತಿ ಕಟ್ಟುವಲ್ಲಿ ನಾವು ನಿರಂತರವಾಗಿ ಹಿಂದುಳಿಯುತ್ತಿದ್ದೇವೆ. ನಾವು ಅಮಾಸ್ ಅಥವಾ ಇಸ್ರೇಲ್ ಪರ ಅಲ್ಲ. ನ್ಯಾಯ ಮತ್ತು ಅನ್ಯಾಯವನ್ನು ನೋಡುತ್ತೇವೆ.
ಸಹಾನುಭೂತಿಯಲ್ಲಿ ನೋಡುವಾಗ ಎರಡೂ ಕಣ್ಣು ಬಿಟ್ಟು ನೋಡಬೇಕು. ಪ್ರತಿಯೊಂದನ್ನು ರಾಜಕೀಯ ವ್ಯಕ್ತಿಗಳ ಮೇಲೆ ಬಿಡಲು ಆಗುವುದಿಲ್ಲ. ಅಧಿಕಾರದ ಹಿಂದೆ ಹೋಗುವ ವ್ಯಕ್ತಿಗಳು ಶಾಂತಿಯನ್ನು ಹೇಗೆ ಬಯಸುತ್ತಾರೆ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಕ್ರಿಸ್ತಿಯನ್ ಇನ್ಸಿಟ್ಯೂಟ್ ಫಾರ್ ದಿ ಸ್ಟಡಿ ಆಫ್ ರಿಲಿಜಿಯನ್ ಆಂಡ್ ಸೊಸೈಟಿ ನಿರ್ದೇಶಕ ವಿನಯ್‍ರಾಜ್, ಇಮ್ಯಾನುಯೆಲ್, ಚಿತ್ರಾ, ಜಮಾಅತೆ ಇಸ್ಲಾಮಿ ಹಿಂದ್‍ನ ಕಾರ್ಯದರ್ಶಿ ಮುಹಮ್ಮದ್ ಯೂಸುಫ್ ಖನ್ನಿ, ವಕೀಲ ವಿನಯ್ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.
ಪ್ರಮುಖ ಒತ್ತಾಯಗಳು
►ಇಸ್ರೇಲ್ ಮಿಲಿಟರಿ ಶಸ್ತ್ರಾಸ್ತ್ರ ಮತ್ತು ಸಲಕರಣೆಗಳನ್ನು ಪೂರೈಸುವ ಕಂಪೆನಿಗಳಿಗೆ ಪರವಾನಿಗೆಗಳನ್ನು ರದ್ದುಗೊಳಿಸಬೇಕು.
►ಫೆಲೇಸ್ತೀನ್ ಮತ್ತು ಭಾರತೀಯರ ಮೇಲೆ ಬಳಸಲಾಗುವ ಶಸ್ತ್ರಾಸ್ತ್ರಗಳು ಮತ್ತು ಕಣ್ಗಾವಲು ತಂತ್ರಜ್ಞಾನದ ಆಮದು, ಉದ್ಯಮ ನಿಲ್ಲಿಸಬೇಕು.
►ಇಸ್ರೇಲ್ ಸಂಸ್ಥೆಗಳೊಂದಿಗೆ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು.
►ಕಾರ್ಮಿಕ ಒಪ್ಪಂದವನ್ನು ಕೊನೆಗೊಳಿಸಿ, ಇಸ್ರೇಲ್‍ನಿಂದ ಭಾರತೀಯ ಕಾರ್ಮಿಕರನ್ನು ಹಿಂದೆಗೆದುಕೊಳ್ಳಬೇಕು. ಹೆಚ್ಚಿನ ನೇಮಕಾತಿಯನ್ನು ನಿಲ್ಲಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಒತ್ತಾಯಿಸಲಾಯಿತು.