ವಯನಾಡು ಸಂತ್ರಸ್ತರಿಗೆ ಮನೆ : ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ ಸಿದ್ದರಾಮಯ್ಯ ಪತ್ರ

Update: 2024-12-11 17:04 GMT

ಆರ್‌.ಅಶೋಕ್/ಸಿದ್ದರಾಮಯ್ಯ

ಬೆಂಗಳೂರು : ಕೇರಳದ ವಯನಾಡು ಭೂಕುಸಿತದ ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ʼಎಕ್ಸ್‌ʼ ನಲ್ಲಿ ಕೇರಳ ಸಿಎಂಗೆ ಸಿದ್ದರಾಮಯ್ಯ ಬರೆದಿರುವ ಪತ್ರವನ್ನು ಹಂಚಿಕೊಂಡಿರುವ ಅವರು, ʼಬೆಂಗಳೂರು ನಗರದ ಉದ್ದಗಲಕ್ಕೂ ಬಾಯ್ತೆರೆದಿರುವ ರಸ್ತೆಗುಂಡಿ ಮುಚ್ಚಲು ಹಣವಿಲ್ಲ. ಆದರೆ, ಹೈಕಮಾಂಡ್ ನಾಯಕರನ್ನು ಓಲೈಸಲು ಕೇರಳ ರಾಜ್ಯದಲ್ಲಿ ಮನೆ ನಿರ್ಮಿಸಿಕೊಡಲು ಹೊರಟಿದೆ ಈ ನಾಡದ್ರೋಹಿ ಕಾಂಗ್ರೆಸ್ ಸರಕಾರʼ ಎಂದು ಆರ್.ಅಶೋಕ್ ಟೀಕಿಸಿದ್ದಾರೆ.

ʼಕೇರಳಕ್ಕೆ ಉಪಕಾರಿ, ಕರ್ನಾಟಕಕ್ಕೆ ಮಾರಿ. ಭ್ರಷ್ಟಾಚಾರದ ಕಳಂಕ ಮೆತ್ತಿಕೊಂಡು, ಭಂಡತನದಿಂದ ಕುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಸಿಎಂ ಸಿದ್ದರಾಮಯ್ಯನವರ ಸರಕಾರ, ಹೈಕಮಾಂಡ್ ನಾಯಕರನ್ನು ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣವನ್ನು ಪೋಲು ಮಾಡುತ್ತಿದೆʼ ಎಂದು ದೂರಿದ್ದಾರೆ.

ʼಅಕಾಲಿಕ ಮಳೆಯಿಂದ ಬೆಳೆ ಹಾನಿಗೊಳಗಾಗಿ ಸಂಕಷ್ಟದಲ್ಲಿರುವ ರೈತತರಿಗೆ ಪರಿಹಾರ ಕೊಡಲು ಹಣವಿಲ್ಲ. ಸರಕಾರಿ ಆಸ್ಪತ್ರೆಗಳಲ್ಲಿ ಕಳಪೆ ಔಷಧಿಯಿಂದ ಸಾವನ್ನಪ್ಪಿರುವ ಬಾಣಂತಿ ಮಹಿಳೆಯರ ಕುಟುಂಬಗಳಿಗೆ ಪರಿಹಾರ ಕೊಟ್ಟಿಲ್ಲʼ ಎಂದು ಅವರು ಟೀಕಿಸಿದ್ದಾರೆ.

ಸಿಎಂ ಪತ್ರದಲ್ಲೇನಿದೆ? :

‘ಕಳೆದ ಜುಲೈನಲ್ಲಿ ವಯನಾಡ್‌ನಲ್ಲಿ ಸಂಭವಿಸಿದ ಭೂ ಕುಸಿತದಿಂದ ಸಂತ್ರಸ್ತರಾದ ಕುಟುಂಬಗಳಿಗೆ 100 ಮನೆ ನಿರ್ಮಿಸಿ ಕೊಡುವ ಭರವಸೆಯಂತೆ, ಮನೆ ನಿರ್ಮಿಸಲು ಅಗತ್ಯವಾದ ಭೂಮಿ ಖರೀದಿಯ ವೆಚ್ಚವನ್ನು ಭರಿಸಲು ಸಿದ್ಧ’ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ಭೂಕುಸಿತದಿಂದಾಗಿ ಬದುಕಿನ ನೆಲೆ ಕಳೆದುಕೊಂಡ ಜನರಿಗೆ ಹೊಸ ಬದುಕು ಕಟ್ಟಿಕೊಡುವ ದೃಷ್ಟಿಯಿಂದ ಕರ್ನಾಟಕ ಸರಕಾರದ ಕಡೆಯಿಂದ 100 ಮನೆ ಕಟ್ಟಿಕೊಡುವ ಭರವಸೆಗೆ ಬದ್ಧವಾಗಿರುವುದಾಗಿ ಪತ್ರದಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News