ಕಾಂಗ್ರೆಸ್ ಸರಕಾರ ಜನ ವಿರೋಧಿ ಬಜೆಟ್ ಮಂಡಿಸಿದೆ : ವಿಪಕ್ಷ ನಾಯಕ ಆರ್.ಅಶೋಕ್

Update: 2025-03-07 22:49 IST
ಕಾಂಗ್ರೆಸ್ ಸರಕಾರ ಜನ ವಿರೋಧಿ ಬಜೆಟ್ ಮಂಡಿಸಿದೆ : ವಿಪಕ್ಷ ನಾಯಕ ಆರ್.ಅಶೋಕ್
  • whatsapp icon

ಬೆಂಗಳೂರು : ಕಾಂಗ್ರೆಸ್ ಸರಕಾರ ಜನ ವಿರೋಧಿ ಹಾಗೂ ಮುಸ್ಲಿಮರ ಬಜೆಟ್ ಮಂಡಿಸಿದೆ. ಜೊತೆಗೆ ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆಯಂತೆ 1.16ಲಕ್ಷ ಕೋಟಿ ರೂ.ಸಾಲ ಮಾಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಬಜೆಟ್ ಮಂಡನೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕೊನೆಯ ಬಜೆಟ್ ಮಂಡಿಸಿದ್ದು, ಈ ಬಜೆಟ್‍ನಲ್ಲಿ ಯಾವುದೇ ಹೊಸ ಘೋಷಣೆ ಇಲ್ಲ. ಆದರೆ ತಿಪ್ಪೆ ಸಾರಿಸುವಂತೆ ಹಿಂದಿನ ಕಾರ್ಯಕ್ರಮಗಳನ್ನು ಮುಂದುವರಿಸಲಾಗಿದೆ ಎಂದು ಟೀಕಿಸಿದರು.

ಹಳೆ ಮೈಸೂರು ಅಥವಾ ಉತ್ತರ ಕರ್ನಾಟಕಕ್ಕೆ ನೀರಾವರಿ ಯೋಜನೆಗಳನ್ನು ಕೇಂದ್ರದ ಅನುಮತಿ ಬಳಿಕ ಮುಂದುವರಿಸುತ್ತೇವೆ ಎಂದು ತಿಳಿಸಲಾಗಿದೆ. ಇತಿಹಾಸದಲ್ಲಿ ಒಂದೇ ವರ್ಷದಲ್ಲಿ ಅತ್ಯಧಿಕ 1,16,170 ಕೋಟಿ ರೂ.ಸಾಲ ಮಾಡಲಾಗಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯರ ದಾಖಲೆಯಾಗಿದೆ. ಒಟ್ಟು ಸಾಲದ ಪ್ರಮಾಣ 7,81,095 ಕೋಟಿ ರೂ.ಗೆ ಏರಿದೆ ಎಂದು ಅವರು ದೂರಿದರು.

ಅಬಕಾರಿ ಇಲಾಖೆಗೆ 40 ಸಾವಿರ ಕೋಟಿ ರೂ.ಗುರಿ ನೀಡಿ, ಹೊಸ ಬಾರ್‍ಗಳನ್ನು ಘೋಷಿಸಲಾಗಿದೆ. ಅನ್ನಭಾಗ್ಯ ಹೋಗಿ ‘ಕುಡುಕರ ಭಾಗ್ಯ’ ಬಂದಿದೆ. 4-5ಸಾವಿರ ಕೋಟಿ ರೂ.ಆದಾಯ ಹೆಚ್ಚಿಸಲು ಈ ಕ್ರಮ ವಹಿಸಲಾಗಿದೆ ಎಂದ ಅವರು, ಕಳೆದ ಬಜೆಟ್‍ನಲ್ಲೂ ಯಾವುದೇ ತೆರಿಗೆ ಘೋಷಣೆ ಮಾಡಿರಲಿಲ್ಲ. ಬಳಿಕ ತೆರಿಗೆಗಳನ್ನು ಹೆಚ್ಚಿಸಲಾಯಿತು. ಈ ಬಾರಿಯೂ ಬಜೆಟ್ ನಂತರ ತೆರಿಗೆ ಏರಿಕೆ ಮಾಡಲಾಗುತ್ತದೆ ಎಂದು ಅವರು ಟೀಕಿಸಿದರು.

ಮುಸ್ಲಿಮರ ಬಜೆಟ್: ‘ಇದು ಕೇವಲ ಮುಸ್ಲಿಮರ ಬಜೆಟ್. ಮುಸ್ಲಿಮರ ಜಟಕಾ ಗಾಡಿ ಏರಿಕೊಂಡು ಬಂದು ಸಿಎಂ ಸಿದ್ದರಾಮಯ್ಯ ಪ್ರಯಾಣ ಮಾಡಿದ್ದಾರೆ. ಅಲ್ಪಸಂಖ್ಯಾತರ ಕಾಲನಿ ಅಭಿವೃದ್ಧಿಗೆ 1ಸಾವಿರ ಕೋಟಿ ರೂ.ನೀಡಲಾಗಿದೆ. ವಕ್ಫ್ ಬೋರ್ಡ್ ಮುಚ್ಚಿ ಎಂದರೆ, ಅದಕ್ಕೆ 150ಕೋಟಿ ರೂ.ನೀಡಿದ್ದಾರೆ. ಮುಸ್ಲಿಮರ ವಿದೇಶ ಪ್ರಯಾಣಕ್ಕೆ 30ಲಕ್ಷ ರೂ.ನೀಡಲಾಗುತ್ತದೆ. ಆದರೆ ಗುರುದ್ವಾರಗಳಿಗೆ ಕೇವಲ 2 ಕೋಟಿ ರೂ.ನೀಡಲಾಗಿದೆ. ಮುಸ್ಲಿಮರ ಓಟಿನ ಋಣ ತೀರಿಸಲು ಈ ಬಜೆಟ್ ನೀಡಲಾಗಿದೆ ಎಂದು ಅವರು ಆರೋಪಿಸಿದರು.

ಬೆಂಗಳೂರಿನಲ್ಲಿ 40ಸಾವಿರ ಕೋಟಿ ರೂ.ವೆಚ್ಚದಲ್ಲಿ ಸುರಂಗ ಯೋಜನೆ ಘೋಷಿಸಲಾಗಿದೆ. ಫೆರಿಫರಲ್ ರಿಂಗ್ ರಸ್ತೆಯನ್ನೇ ಇನ್ನೂ ಮಾಡಿಲ್ಲ. ಇನ್ನು ಸುರಂಗ ಯೋಜನೆ ಮಾಡಲು ಯಾರೂ ಮುಂದೆ ಬರಲ್ಲ. ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಬೋಗಸ್ ಬಜೆಟ್ ಮಂಡಿಸಲಾಗಿದೆ ಎಂದು ಆರ್. ಅಶೋಕ್ ಪ್ರತಿಕ್ರಿಯೆ ನೀಡಿದರು.

ಮುಸ್ಲಿಂ ಸಮುದಾಯ ಓಲೈಸುವ ಬಜೆಟ್: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ರಾಜ್ಯದ ಜನತೆಯ ನಿರೀಕ್ಷೆಯನ್ನು ಹುಸಿ ಮಾಡಿದೆ. ಅಲ್ಪಸಂಖ್ಯಾತರ ಹೆಸರಿನಲ್ಲಿ ಮುಸ್ಲಿಂ ಸಮುದಾಯವನ್ನು ಓಲೈಸಲು ಒತ್ತು ನೀಡಿರುವ ಬಜೆಟ್ ಇದಾಗಿದೆ. ನಿಖರ ಭರವಸೆ ನೀಡುವ ಯೋಜನೆ ಹಾಗೂ ಅದಕ್ಕೆ ಅನುದಾನ ಪ್ರಕಟಿಸದೇ ಆಕರ್ಷಕ ಕಾರ್ಯಕ್ರಮಗಳನ್ನು ಘೋಷಿಸೋ, ಜನರ ಮೂಗಿಗೆ ತುಪ್ಪ ಸವರಲು ಹೊರಟಿದ್ದಾರೆ’

-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

ತೆಂಗಿನ ಚಿಪ್ಪು ಮಾತ್ರ: ಸಿದ್ದರಾಮಯ್ಯ ಅವರು ಎಸ್‍ಸಿ, ಎಸ್‍ಟಿ, ಒಬಿಸಿ ಸಮುದಾಯಗಳಿಗೆ ಕೊಟ್ಟಿರುವುದು ಕೇವಲ ತೆಂಗಿನ ಚಿಪ್ಪು ಮಾತ್ರ ಎಂದು ಪ್ರತಿಪಕ್ಷ ಬಿಜೆಪಿ ಕಿಡಿಕಾರಿದೆ.

ಶುಕ್ರವಾರ ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ ಮುಸ್ಲಿಮರಿಗೆ ಸರಕಾರಿ ಗುತ್ತಿಗೆಯಲ್ಲಿ ಮೀಸಲಾತಿ, ಸರಳ ಮದುವೆಗೆ 50 ಸಾವಿರ ರೂ. ವಕ್ಫ್, ಖಬರಸ್ಥಾನಗಳ ಮೂಲಸೌಕರ್ಯಕ್ಕೆ 150 ಕೋಟಿ ರೂ., ಮುಸ್ಲಿಮರ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 50 ಲಕ್ಷ ರೂ., ಮುಸ್ಲಿಮರು ಅತಿ ಹೆಚ್ಚು ವಾಸವಿರುವ ಪ್ರದೇಶದಲ್ಲಿ ಐಟಿಐ ಸ್ಥಾಪನೆ ಮಾಡಿ, ದೇಶದ ಯಾವುದೇ ರಾಜ್ಯದಲ್ಲೂ ಇಲ್ಲದ ಕಾಂಗ್ರೆಸ್‍ನ ಕರ್ನಾಟಕ ದಿವಾಳಿ ಮಾಡೆಲ್ ಜಾರಿ ಆಗುತ್ತಿದೆ ಎಂದು ಟೀಕಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News