ಅನಗತ್ಯ ವಿಷಯದಲ್ಲಿ ಮೂಗು ತೂರಿಸಬೇಡಿ: ಸಿಎಂಗೆ ಆರ್.ಅಶೋಕ್

Update: 2025-04-26 22:35 IST
ಅನಗತ್ಯ ವಿಷಯದಲ್ಲಿ ಮೂಗು ತೂರಿಸಬೇಡಿ: ಸಿಎಂಗೆ ಆರ್.ಅಶೋಕ್
  • whatsapp icon

ಬೆಂಗಳೂರು : ‘ರಾಜ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಾಂಗ್ಲಾದೇಶಿ, ರೋಹಿಂಗ್ಯ, ಪಾಕಿಸ್ತಾನಿ ಅಕ್ರಮ ವಲಸಿಗರು ರಾಜಾರೋಷವಾಗಿ ತಿರುಗಾಡಿಕೊಂಡಿದ್ದಾರೆ. ಮೊದಲು ಅವರನ್ನ ಗುರುತಿಸಿ, ಗಡೀಪಾರು ಮಾಡಿ ಕನ್ನಡಿಗರ ಸುರಕ್ಷತೆ ಕಾಪಾಡುವ ಕಡೆ ಗಮನ ಕೊಡಿ. ಸುಮ್ಮನೆ ತಮ್ಮದಲ್ಲದ ವಿಷಯದಲ್ಲಿ ಅನಾವಶ್ಯಕವಾಗಿ ಮೂಗು ತೂರಿಸಬೇಡಿ’ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್, ಸಿಎಂ ಸಿದ್ದರಾಮಯ್ಯನವರಿಗೆ ಸಲಹೆ ನೀಡಿದ್ದಾರೆ.

ಶನಿವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅಶೋಕ್, ‘ನಲವತ್ತು ವರ್ಷಗಳ ಸುದೀರ್ಘ ರಾಜಕೀಯ ಅನುಭವ ಇರುವ, ಎರಡೆರಡು ಬಾರಿ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯನವರಿಗೆ ಯಾವ ಸಂದರ್ಭದಲ್ಲಿ ಏನು ಮಾತನಾಡಬೇಕು ಎನ್ನುವ ಕನಿಷ್ಠ ಪರಿಜ್ಞಾನ ಇಲ್ಲದಿರುವುದು ಕರ್ನಾಟಕದ ದೌರ್ಭಾಗ್ಯ’ ಎಂದು ಟೀಕಿಸಿದ್ದಾರೆ.

‘ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ, ಜಮ್ಮು-ಕಾಶ್ಮೀರದ ಪಹಲ್ಗಾಮ್‍ನಲ್ಲಿ ಪಾಕಿಸ್ತಾನಿ ಪ್ರಾಯೋಜಿತ ಉಗ್ರರ ದಾಳಿ ಆಗಿದೆ. ಗಡಿಯಾಚೆಗಿನ ನುಸುಳುಕೋರರು ನಡೆಸಿರುವ ಈ ಕೃತ್ಯ ಈಗ ಕೇವಲ ರಾಷ್ಟ್ರೀಯ ಭದ್ರತೆಯ ಪ್ರಶ್ನೆಯಾಗಿ ಉಳಿದಿಲ್ಲ. ಇದು ಭಾರತದ ಸಾರ್ವಭೌಮತೆಗೆ, ಘನತೆಗೆ ಎಸೆದಿರುವ ಸವಾಲು. ಇಂತಹ ಸನ್ನಿವೇಶದಲ್ಲಿ ಇಡೀ ದೇಶವೇ ಪಕ್ಷಾತೀತವಾಗಿ ಒಂದು ದನಿಯಾಗಿರಬೇಕು’ ಎಂದು ಅಶೋಕ್ ಹೇಳಿದ್ದಾರೆ.

‘ಇದಕ್ಕಾಗಿಯೇ ಕೇಂದ್ರ ಸರಕಾರ ಸರ್ವಪಕ್ಷ ಸಭೆ ನಡೆಸಿ ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಿದೆ. ನಿಮ್ಮದೇ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕತ್ವ ಸೇರಿದಂತೆ ಎಲ್ಲ ಪಕ್ಷಗಳೂ ಸರ್ವಾನುಮತದಿಂದ ಕೇಂದ್ರ ಸರಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನ ಬೆಂಬಲಿಸುತ್ತೇವೆ ಎಂದು ಹೇಳಿವೆ’ ಎಂದು ಅಶೋಕ್ ಉಲ್ಲೇಖಿಸಿದ್ದಾರೆ.

‘ನಮ್ಮ ದೇಶದಲ್ಲಿ ವೃತ್ತಿಪರ ಸೇನಾಪಡೆಗಳಿವೆ. ಯಾವ ಸಂದರ್ಭದಲ್ಲಿ ಎಂತಹ ಕ್ರಮ ಕೈಗೊಳ್ಳಬೇಕು ಎನ್ನುವ ಪರಿಣಿತಿ, ಅನುಭವ ನಮ್ಮ ಸೇನಾಪಡೆಗಳಿವೆ. ಈ ವಿಷಯದಲ್ಲಿ ನಿಮ್ಮ ಸಲಹೆಯ ಅಗತ್ಯವೂ ಇಲ್ಲ, ಸಲಹೆ ನೀಡುವ ಯಾವುದೇ ಅರ್ಹತೆಯೂ ತಮಗಿಲ್ಲ’ ಎಂದು ಅಶೋಕ್, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News