ನ್ಯಾಯಾಲಯದ ಷರತ್ತು ಉಲ್ಲಂಘನೆ ಆರೋಪ : ಕಿರುತೆರೆ ನಟ ರಜತ್‍ಗೆ 14 ದಿನ ನ್ಯಾಯಾಂಗ ಬಂಧನ

ಬೆಂಗಳೂರು : ನ್ಯಾಯಾಲಯದ ಷರತ್ತು ಉಲ್ಲಂಘಿಸಿದ ಆರೋಪದಡಿ ಕಿರುತೆರೆ ನಟ ರಜತ್ ಕಿಶನ್ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ 24ನೇ ಎಸಿಜೆಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
ಮತ್ತೋರ್ವ ಆರೋಪಿ, ಕಿರುತೆರೆ ನಟ ವಿನಯ್ ಗೌಡ ಅವರಿಗೆ ನ್ಯಾಯಾಲಯ 500 ರೂಪಾಯಿ ದಂಡ ವಿಧಿಸಿದೆ. ಇದೇ ವೇಳೆ, ಜಾಮೀನು ಕೋರಿ ರಜತ್ ಕಿಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದು, ತೀರ್ಪು ಆದೇಶವನ್ನು ನ್ಯಾಯಾಧೀಶರು ಎ.17ಕ್ಕೆ ಕಾಯ್ದಿರಿಸಿದ್ದಾರೆ.
ಮಾರಕಾಸ್ತ್ರ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡಿದ್ದ ಪ್ರಕರಣದಲ್ಲಿ ಕಿರುತೆರೆ ನಟರಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರನ್ನು ಮಾರ್ಚ್ 25ರಂದು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದರು. ಬಳಿಕ ಪ್ರಕರಣದಲ್ಲಿ ಇಬ್ಬರೂ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ್ದ ನ್ಯಾಯಾಲಯ, ವಿಚಾರಣೆಯ ಸಂದರ್ಭದಲ್ಲಿ ಖುದ್ದು ಹಾಜರಿರುವಂತೆ ಷರತ್ತು ವಿಧಿಸಿತ್ತು.
ಆದರೆ, ನ್ಯಾಯಾಲಯದ ವಿಚಾರಣೆಗೆ ಆರೋಪಿ ರಜತ್ ಕಿಶನ್ ಹಾಜರಾಗಿರಲಿಲ್ಲ. ಹಾಜರಾಗದಿರಲು ಸೂಕ್ತ ಕಾರಣ ನೀಡಿ ವಿನಾಯಿತಿ ಅರ್ಜಿಯನ್ನೂ ಸಲ್ಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ, ರಜತ್ ಕಿಶನ್ ವಿರುದ್ಧ ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿತ್ತು.
ವಾರೆಂಟ್‍ನ ಅನ್ವಯ ರಜತ್ ಕಿಶನ್ ಅವರನ್ನು ಬುಧವಾರ ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿ, 24ನೇ ಎಸಿಜೆಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ರಜತ್ ಕಿಶನ್ ಬಂಧನವಾಗುತ್ತಿದ್ದಂತೆ ಇತ್ತ ವಿನಯ್‍ಗೌಡ ನ್ಯಾಯಾಲಯದ ಮುಂದೆ ಹಾಜರಾಗಿದ್ದರು.