ತಿರುಮಲ ಕರ್ನಾಟಕ ರಾಜ್ಯ ಛತ್ರದ ನವೀಕರಣ ಕಾಮಗಾರಿ ಪೂರ್ಣ: ರಾಮಲಿಂಗಾರೆಡ್ಡಿ

Update: 2025-03-19 21:08 IST
ತಿರುಮಲ ಕರ್ನಾಟಕ ರಾಜ್ಯ ಛತ್ರದ ನವೀಕರಣ ಕಾಮಗಾರಿ ಪೂರ್ಣ: ರಾಮಲಿಂಗಾರೆಡ್ಡಿ
  • whatsapp icon

ಬೆಂಗಳೂರು : ತಿರುಪತಿಯಲ್ಲಿರುವ ‘ತಿರುಮಲ ಕರ್ನಾಟಕ ರಾಜ್ಯ ಛತ್ರ’ದ ನವೀಕರಣ ಪೂರ್ಣಗೊಂಡಿದೆ. ಹಾಗೆಯೇ ಉತ್ತರ ಪ್ರದೇಶದ ಕಾಶಿ/ ವಾರಣಾಸಿಯ ಕಟ್ಟಡ ಕಾಮಗಾರಿಯನ್ನು ಶೀಘ್ರದಲ್ಲಿಯೇ ಕೈಗೊಳ್ಳಲಾಗುವುದು ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಬುಧವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಟಿ.ಎ.ಶರವಣ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ತಿರುಪತಿಯಲ್ಲಿರುವ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿರುವ ತಿರುಮಲ ಕರ್ನಾಟಕ ರಾಜ್ಯ ಛತ್ರ ನವೀಕರಣ ಮುಕ್ತಾಯಗೊಂಡಿದೆ ಎಂದರು.

ತಿರುಮಲ ಕರ್ನಾಟಕ ರಾಜ್ಯ ಛತ್ರದಲ್ಲಿ ಹಳೇಬೀಡು ಬ್ಲಾಕ್ (ಕೆ.ಪಿ.ಎಸ್) ಕಟ್ಟಡದ ನವೀಕರಣ, ಹಂಪಿ ಮತ್ತು ಐಹೊಳೆ ಬ್ಲಾಕ್ ಕಟ್ಟಡದ ಕಾಮಗಾರಿಗಳು 2024-25ಸಾಲಿನಲ್ಲಿ ಮುಕ್ತಾಯಗೊಂಡಿದ್ದು ಯಾತ್ರಾರ್ಥಿಗಳಿಗೆ ಆಫ್‍ಲೈನ್ ಮತ್ತು ಆನ್‍ಲೈನ್ ಮೂಲಕ ಕೊಠಡಿಗಳನ್ನು ಮಾಡಲಾಗುತ್ತಿದೆ. ಉಳಿದಂತೆ ಕೃಷ್ಣದೇವರಾಯ ವಿ.ವಿ.ಐ.ಪಿ ಬ್ಲಾಕ್ ಮತ್ತು ಶ್ರೀ ಕೃಷ್ಣ ರಾಜೇಂದ್ರ ಒಡೆಯರ್ ಕಲ್ಯಾಣ ಮಂಟಪ ಕಟ್ಟಡದ ಕಾಮಗಾರಿಗಳು ಅಂತಿಮ ಹಂತದಲ್ಲಿದ್ದು ಸದರಿ ಕಟ್ಟಡಗಳಿಂದ ಪ್ರಸಕ್ತ ಸಾಲಿನಿಂದ ಹೆಚ್ಚಿನ ಆದಾಯವನ್ನು ನಿರೀಕ್ಷಿಸಲಾಗುತ್ತಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.

ಪ್ರಸ್ತುತ ತಿರುಮಲ ಕರ್ನಾಟಕ ರಾಜ್ಯ ಛತ್ರದಲ್ಲಿ ಹೊಸದಾಗಿ ನವೀಕರಿಸಿರುವ ಹಳೇಬೀಡು(ಕೆಪಿಎಸ್) ಮತ್ತು ಹೊಸದಾಗಿ ನಿರ್ಮಾಣವಾಗಿರುವ ಹಂಪಿ ಮತ್ತು ಐಹೊಳೆ ಕಟ್ಟಡಗಳ ಸ್ವಚ್ಛತಾ ನಿರ್ವಹಣೆಯನ್ನು ಖಾಸಗಿ ಸಂಸ್ಥೆಯವರಿಗೆ ವಹಿಸಲಾಗಿದೆ. ತಿರುಮಲ ಕರ್ನಾಟಕ ರಾಜ್ಯ ಛತ್ರದ ಆವರಣದಲ್ಲಿ ಸಮಗ್ರ ಅಭಿವೃದ್ಧಿ ಯೋಜನೆಯ ಕಾಮಗಾರಿಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಛತ್ರದ ದೈನಂದಿನ ನಿರ್ವಹಣೆಯ ವೆಚ್ಚಗಳಿಗಾಗಿ 2022-23ನೇ ಸಾಲಿನಿಂದ ಇಲ್ಲಿಯವರೆಗೆ ಸರಕಾರದಿಂದ 400 ಲಕ್ಷಗಳ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ವಾರಣಾಸಿ ಕರ್ನಾಟಕ ರಾಜ್ಯ ಛತ್ರದಲ್ಲಿ 4 ಮಂದಿ ಮತ್ತು ತಿರುಮಲದ ಕರ್ನಾಟಕ ರಾಜ್ಯ ಛತ್ರದಲ್ಲಿ 51 ಮಂದಿ ಅಧಿಕಾರಿ/ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಎಲ್ಲಾ ಸಿಬ್ಬಂದಿಗಳಿಗೆ ಸಮವಸ್ತ್ರ ಧರಿಸುವಂತೆ ಸೂಚಿಸಲಾಗುವುದು ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಉತ್ತರ ಪ್ರದೇಶದ ಕಾಶಿ/ವಾರಣಾಸಿಯಲ್ಲಿ 1928ನೇ ಸಾಲಿನಲ್ಲಿ ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಿಸಿರುವ ಹಳೇ ಕಟ್ಟಡ ಮತ್ತು 2002ರಲ್ಲಿ ನಿರ್ಮಿಸಿರುವ ಕಟ್ಟಡಗಳಿದ್ದು, ಈ ಕಟ್ಟಡಗಳ ಪೈಕಿ ಹಳೆಯ ಕಟ್ಟಡವು ಭಾಗಶಃ ಕುಸಿದಿರುವ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳ ಹಿತದೃಷ್ಟಿಯಿಂದ ಎರಡು ಕಟ್ಟಡದಲ್ಲಿನ ಕೊಠಡಿಗಳ ಹಂಚಿಕೆಯನ್ನು 2024 ರಿಂದ ಸ್ಥಗಿತಗೊಳಿಸಲಾಗಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಕಾಶಿ ಮತ್ತು ತಿರುಮಲ ಕರ್ನಾಟಕ ರಾಜ್ಯ ಛತ್ರ/ಕರ್ನಾಟಕ ಭವನಗಳ ನಿರ್ವಹಣೆಯನ್ನು ಧಾರ್ಮಿಕ ದತ್ತಿ ಇಲಾಖೆಯಿಂದ ನಿರ್ವಹಿಸಲಾಗುತ್ತಿದೆ. ವಾರಣಾಸಿ ಕರ್ನಾಟಕ ರಾಜ್ಯ ಛತ್ರದ ನಿರ್ವಹಣೆಯ ವೆಚ್ಚವನ್ನು ರಾಜ್ಯ ಛತ್ರದ ಆದಾಯದಿಂದ ಭರಿಸಲಾಗುತ್ತಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News