ದೇವಸ್ಥಾನಗಳ ಜಮೀನು ದೇವಸ್ಥಾನಗಳಿಗೇ ಇಂಡೀಕರಣ: ರಾಮಲಿಂಗಾರೆಡ್ಡಿ

Update: 2025-03-19 21:41 IST
ದೇವಸ್ಥಾನಗಳ ಜಮೀನು ದೇವಸ್ಥಾನಗಳಿಗೇ ಇಂಡೀಕರಣ: ರಾಮಲಿಂಗಾರೆಡ್ಡಿ
  • whatsapp icon

ಬೆಂಗಳೂರು: ದೇವಸ್ಥಾನಗಳ ಜಮೀನುಗಳನ್ನು ದೇವಸ್ಥಾನಗಳಿಗೇ ಇಂಡೀಕರಣ ಮಾಡಲಾಗುವುದು ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಬುಧವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಚಿಕ್ಕಮಗಳೂರಿನ ಜಾಗರ ಹೋಬಳಿ ಇನಾಂ ದತ್ತಾತ್ರೇಯ ಪೀಠದ ಜಮೀನಿಗೆ ಸಂಬಂಧಿಸಿದಂತೆ ಈಗಾಗಲೇ ಪ್ರಧಾನ ಕಾರ್ಯದರ್ಶಿಗಳಿಗೆ ತಿಳಿಸಲಾಗಿದ್ದು, ಅವರು ಪರಿಶೀಲಿಸಿ ವರದಿ ನೀಡಿದ ನಂತರ ಅಗತ್ಯ ಕ್ರಮ ವಹಿಸಲಾಗುವುದು ಎಂದರು.

ಚಿಕ್ಕಮಗಳೂರಿನ ಜಾಗರ ಹೋಬಳಿ ಇನಾಂ ದತ್ತಾತ್ರೇಯ ಪೀಠ ಗ್ರಾಮದ ಆಕಾರ ಬಂದಿನಂತೆ ಒಟ್ಟು 6213 ಎಕರೆ ಆಸ್ತಿ ಇರುತ್ತದೆ. ಈ ಆಸ್ತಿಯಲ್ಲಿ ಪ್ಲಾಂಟೇಶನ್ 2453 ಎಕರೆ, ಬಾಗಾಯ್ತು 8 ಎಕರೆ, ಸರಕಾರಿ ಖರಾಬು 3,751 ಎಕರೆ ಇರುತ್ತದೆ. ಇನಾಂ ದತ್ತಾತ್ರೇಯ ಪೀಠ ಗ್ರಾಮದ ಸರಕಾರಿ ಸರ್ವೆ ನಂಬರ್‌ ನಲ್ಲಿ ಖಾಸಗಿ ವ್ಯಕ್ತಿಗಳಿಗೆ ದರ್ಖಾಸ್ತು ಹಾಗೂ ನಮೂನೆ 50 ಮತ್ತು 53ರಲ್ಲಿ ಒಟ್ಟು 104 ಎಕರೆ ಜಮೀನು ಮಂಜೂರಾಗಿದೆ. ಆರ್.ಆರ್.ಇಂಡೆಕ್ಸ್‍ನಂತೆ ಇನಾಂ ದತ್ತಾತ್ರೇಯ ಪೀಠಕ್ಕೆ ಒಟ್ಟು 1861 ಎಕರೆ ಜಮೀನು ಇರುವುದು ಕಂಡು ಬಂದಿದೆ ಎಂದು ರಾಮಲಿಂಗಾರೆಡ್ಡಿ ವಿವರಿಸಿದರು.

ಚಿಕ್ಕಮಗಳೂರು ತಾಲ್ಲೂಕು ಕಚೇರಿಯಲ್ಲಿ ಇರುವ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ಅರ್ಜಿ ಇಲ್ಲದ ಮಂಜೂರು ಮಾಡಿರುವ ಪ್ರಕರಣಗಳು ಇದುವರೆವಿಗೂ ಕಂಡು ಬಂದಿರುವುದಿಲ್ಲ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News