ಕೆಎಸ್ಸಾರ್ಟಿಸಿ ಕಾರ್ಮಿಕರ ಕ್ರೀಡಾ ಸಂಕೀರ್ಣಕ್ಕೆ ಚಾಲನೆ ನೀಡಿದ ರಾಮಲಿಂಗಾರೆಡ್ಡಿ

Update: 2023-12-20 17:58 GMT

ಬೆಂಗಳೂರು: ಕೆಎಸ್ಸಾರ್ಟಿಸಿ ಕಾರ್ಮಿಕರ ಆರೋಗ್ಯ ನಿರ್ವಹಣೆ, ಒತ್ತಡ ನಿವಾರಣೆಗಾಗಿ ಕ್ರೀಡಾ ಸಂಕೀರ್ಣವನ್ನು ಆರಂಭಿಸಿದ್ದು, ಇಲ್ಲಿ ಶೆಟಲ್, ಟೇಬಲ್ ಟೆನ್ನಿಸ್, ಕೇರಂ, ಚೆಸ್ ಇತ್ಯಾದಿ ಕ್ರೀಡೆಗಳ ವ್ಯವಸ್ಥೆ ಮಾಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. 

ಬುಧವಾರ ಶಾಂತಿನಗರದ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿ ಆವರಣದಲ್ಲಿ ನಿಗಮದ ಮುದ್ರಣಾಲಯ, ಕ್ರೀಡಾ ಸಂಕೀರ್ಣ ಹಾಗೂ ನೂತನ 15 ಬೊಲೆರೋ ಜೀಪುಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸ್ತುತ ನಿಗಮವು ಈ ಕ್ರೀಡಾ ಸಂಕೀರ್ಣವನ್ನು 69.07ಲಕ್ಷ ರೂ.ವೆಚ್ಚದಲ್ಲಿ ಅಭಿವೃದ್ದಿ ಪಡಿಸಿ ಮೇಲ್ದರ್ಜೆಗೇರಿಸಿದೆ ಎಂದರು.

ನಿಗಮವು 1952ರಲ್ಲಿ ಮುದ್ರಣಾಲಯವನ್ನು ಟಿಕೇಟ್‍ಗಳು, ಪಾಸ್‍ಗಳು ಹಾಗೂ ಲೇಖನ ಸಾಮಗ್ರಿಗಳ ಮುದ್ರಣ ಹಾಗೂ ಸರಬರಾಜು ಕಾರ್ಯಕ್ಕಾಗಿ ಪ್ರಾರಂಭಿಸಲಾಗಿತ್ತು. ಪ್ರಸ್ತುತ ಮುದ್ರಣಾಲಯದಲ್ಲಿ ಟಿಕೆಟ್, ಇ.ಟಿ.ಎಂ ರೋಲ್‍ಗಳು ಗಣಕಯಂತ್ರ ಲೇಖನ ಸಾಮಾಗ್ರಿ, 176 ಬಗೆಯ ಮುದ್ರಣ ಸಾಮಗ್ರಿಗಳು, ವಾರ್ಷಿಕ ಆಡಳಿತ ಮತ್ತು ಲೆಕ್ಕ ಪತ್ರ ಪುಸ್ತಕಗಳು, ಲೆಟರ್ ಹೆಡ್, ವಿಸಿಟಿಂಗ್ ಕಾರ್ಡ್, ಕರ ಪತ್ರಗಳು ಇತ್ಯಾದಿ ಮುದ್ರಣ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.  

ಮುದ್ರಣಾಲಯವು ಪ್ರತಿವರ್ಷ 75ಲಕ್ಷ ರೂ. ಮೌಲ್ಯದ ಇ.ಟಿ.ಎಂ ಟಿಕೆಟ್ ರೋಲ್‍ಗಳನ್ನು ಮುದ್ರಿಸಿ ವಿಭಾಗಗಳಿಗೆ ಸರಬರಾಜು ಮಾಡುತ್ತಿದೆ. ಮುದ್ರಣಾಲಯವು ಪ್ರತಿ ವರ್ಷ 15 ಕೋಟಿ ರೂ.ಗಳ ವಹಿವಾಟನ್ನು ನಿರ್ವಹಿಸುತ್ತಿದೆ. ಪ್ರಸ್ತುತ ಮುದ್ರಣಾಲಯದ ಕಟ್ಟಡದಲ್ಲಿ ಕಾಮಗಾರಿಗಳನ್ನು ನಿರ್ವಹಿಸಿ 39.83 ಲಕ್ಷ ರೂ.ಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗಿದೆ ಎಂದು ಅವರು ಹೇಳಿದರು. 

ನಿಗಮದ ವಿಭಾಗಗಳಲ್ಲಿ ಕಾರ್ಯಚರಣೆಯನ್ನು ಉತ್ತಮಗೊಳಿಸಲು, ಅಪಘಾತ ಪರಿಹಾರ ಸಂದರ್ಭದಲ್ಲಿ ಬಳಕೆಗಾಗಿ, ಮಾರ್ಗ ತನಿಖಾ ಕಾರ್ಯ, ಅವಘಡಗಳ ಸಂಧರ್ಭದಲ್ಲಿ ತುರ್ತು ಬಳಕೆ ಹಾಗೂ ಘಟಕ, ವಿಭಾಗಗಳಲ್ಲಿ ಸುಸೂತ್ರ ಕಾರ್ಯಚರಣೆಗಾಗಿ 15 ಬೊಲೆರೋ ಜೀಪುಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ನಿಗಮದ ವ್ಯಾಪ್ತಿಯಲ್ಲಿ 83 ಘಟಕಗಳಿದ್ದು, ಈಗಾಗಲೇ 50 ಬೊಲೆರೋ ಜೀಪುಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News