ಕೇಂದ್ರದಲ್ಲಿ ಸಚಿವ ಸ್ಥಾನ ಸಿಗದ ಸಂಸದರು ಪುಕ್ಕಟೆ ಮನರಂಜನೆ ನೀಡುತ್ತಿದ್ದಾರೆ : ರಮೇಶ್ ಬಾಬು

Update: 2024-06-20 14:50 GMT

ಬೆಂಗಳೂರು : ಕೇಂದ್ರ ಸರಕಾರದಲ್ಲಿ ಸಚಿವ ಸ್ಥಾನ ಸಿಗದೆ ಹತಾಶರಾಗಿರುವ ಸಂಸದರಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಹಾಗೂ ಗೋವಿಂದ ಕಾರಜೋಳ ರಾಜ್ಯದ ಜನತೆಗೆ ಪುಕ್ಕಟೆ ಮನರಂಜನೆ ನೀಡುತ್ತಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ವ್ಯಂಗ್ಯವಾಡಿದ್ದಾರೆ.

ಗುರುವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕದಲ್ಲಿ ಒಂದು ವರ್ಷದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಕೇಂದ್ರದಲ್ಲಿ ಮಂತ್ರಿ ಸ್ಥಾನ ಬಯಸಿ ಅವಕಾಶ ಸಿಗದೆ ಹತಾಶರಾಗಿರುವ ರಾಜ್ಯದ ಕೆಲವು ಬಿಜೆಪಿ ಸಂಸದರು ಇಂತಹ ಹಳೆಯ ಡೈಲಾಗ್‍ಗಳನ್ನು ಪಠಿಸುವುದರ ಮೂಲಕ ರಾಜ್ಯದ ಜನರಿಗೆ ಪುಕ್ಕಟೆ ಮನರಂಜನೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಬಸವರಾಜ ಬೊಮ್ಮಾಯಿ ಅವರಿಗೆ ಬಹುಶಃ ಇಂತಹ ಹೇಳಿಕೆ ನೀಡಿದರೆ ಅವರ ಮಗನಿಗೆ ಶಿಗ್ಗಾವಿಯ ವಿಧಾನಸಭಾ ಉಪಚುನಾವಣೆಯಲ್ಲಿ ಟಿಕೆಟ್ ನೀಡುವ ಆಸೆ ಹುಟ್ಟಿಸಿ ಅವರ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಬಿಜೆಪಿ ನಾಯಕರು ಮಾಡಿರಬಹುದು. ಲೋಕಸಭಾ ಚುನಾವಣೆಯ ನಂತರ ಕೇಂದ್ರದಲ್ಲಿ ತತ್ತರಿಸಿ ಹೋಗಿರುವ ಬಿಜೆಪಿಯು ಎನ್ ಡಿಎ ಪಾದಗಳಲ್ಲಿ ಶರಣಾಗಿದೆ ಎಂದು ರಮೇಶ್ ಬಾಬು ಟೀಕಿಸಿದ್ದಾರೆ.

ಜೆಡಿಯು ಹಾಗೂ ತೆಲುಗು ದೇಶಂ ಎಂಬ ಇಬ್ಬರು ಹೆಂಡತಿಯರನ್ನು ಸಂಭಾಳಿಸುವ ಅನಿವಾರ್ಯತೆ ಪ್ರಧಾನಿ ಮೋದಿಗೆ ಉಂಟಾಗಿದೆ. ರಾಜ್ಯದ ಹತಾಶ ನಾಯಕ ಬಸವರಾಜ ಬೊಮ್ಮಾಯಿಗೆ ಶಕ್ತಿಯಿದ್ದರೆ ಕೇಂದ್ರದಲ್ಲಿ ಎನ್‍ಡಿಎ ಸರಕಾರ ಉಳಿಸಿಕೊಳ್ಳಲು ಅವರ ಪಕ್ಷದ ನಾಯಕರಿಗೆ ಮತ್ತು ಪ್ರಧಾನಿಗೆ ಸಲಹೆ ನೀಡಲಿ ಎಂದು ಅವರು ಹೇಳಿದ್ದಾರೆ.

ಕಾಲಕ್ಷೇಪ ಮಾಡಲು ಜೊತೆಗಾರರು ಬೇಕಾಗಿದ್ದಲ್ಲಿ ಕೇಂದ್ರ ಸಚಿವ ಸ್ಥಾನದ ಅಪೇಕ್ಷಿತರಾದ ಗೋವಿಂದ ಕಾರಜೋಳ, ಜಗದೀಶ್ ಶೆಟ್ಟರ್ ಇಂತಹ ಸಮಾನ ಮನಸ್ಕರನ್ನು ಸೇರಿಸಿಕೊಳ್ಳಲಿ. ಇದನ್ನು ಬಿಟ್ಟು ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿ ರಾಜ್ಯದ ಜನರಿಗೆ ಮನರಂಜನೆ ನೀಡುವುದು ಬೇಡ ಎಂದು ರಮೇಶ್ ಬಾಬು ತಿಳಿಸಿದ್ದಾರೆ.

ಮಹಾರಾಷ್ಟ್ರದ ಮುಖ್ಯಮಂತ್ರಿ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಇಂತಹದ್ದೇ ಹೇಳಿಕೆಯನ್ನು ನೀಡಿ ಈಗ ತಮ್ಮ ಸರಕಾರವನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಇಡೀ ದೇಶದ ಜನ ಲೋಕಸಭೆಯಲ್ಲಿ ಬಿಜೆಪಿಗೆ ಕಡಿಮೆ ಸ್ಥಾನಗಳನ್ನು ನೀಡುವುದರ ಮೂಲಕ ಮೋದಿಯನ್ನು ತಿರಸ್ಕರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಬಲವಂತದ ಮದುವೆಯ ಮೂಲಕ ಬಲವಂತದ ಸಂಸಾರವನ್ನು ಮಾಡುತ್ತಿರುವ ಕೇಂದ್ರ ಸರಕಾರ ಪತನಗೊಂಡು ಲೋಕಸಭೆಗೆ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆಯಿದೆ. ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಪಡೆದ ಶೇಕಡಾವಾರು ಮತಕ್ಕಿಂತ ಲೋಕಸಭೆಯಲ್ಲಿ ಹೆಚ್ಚುವರಿ ಶೇ.2ರಷ್ಟು ಮತಗಳನ್ನು ಮತ್ತು ಕಳೆದ ಚುನಾವಣೆಗಿಂತ ಹೆಚ್ಚುವರಿ 8 ಸ್ಥಾನಗಳನ್ನು ಕಾಂಗ್ರೆಸ್ ಪಕ್ಷ ಪಡೆದಿದೆ ಎಂದು ರಮೇಶ್ ಬಾಬು ತಿರುಗೇಟು ನೀಡಿದ್ದಾರೆ.

ಇಡೀ ದೇಶದಲ್ಲಿ ಶಾಸಕರ ವ್ಯಾಪಾರ ಮಾಡುತ್ತಿದ್ದ ಬಿಜೆಪಿಗೆ ಜನ ಕಡಿವಾಣ ಹಾಕಿದ್ದಾರೆ. ಈ ಸತ್ಯವನ್ನು ತಿಳಿದಿದ್ದೂ ರಾಜ್ಯ ಸರಕಾರದ ಬಗ್ಗೆ ಮಾತನಾಡುವ ಮೂಲಕ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಮತ್ತು ಗೋವಿಂದ ಕಾರಜೋಳ ರಾಜ್ಯದ ಜನರಿಗೆ ಮನರಂಜನೆ ನೀಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News