ಅಸಮರ್ಥ ವಿಪಕ್ಷ ನಾಯಕನನ್ನು ನೋಡುವ ದೌರ್ಭಾಗ್ಯ ನಮ್ಮದು : ರಮೇಶ್ ಬಾಬು

Update: 2024-06-27 13:11 GMT

ರಮೇಶ್ ಬಾಬು

ಬೆಂಗಳೂರು : ‘ರಾಜ್ಯಕ್ಕೆ ಅಸಮರ್ಥ ಹಾಗೂ ಅತ್ಯಂತ ದೌರ್ಭಾಗ್ಯದ ವಿರೋಧ ಪಕ್ಷದ ನಾಯಕನನ್ನು ಬಿಜೆಪಿ ನೇಮಕ ಮಾಡಿದೆ. ಇವರನ್ನು ನೋಡುವ ದೌರ್ಭಾಗ್ಯ ನಮ್ಮದಾಗಿದೆ’ ಎಂದು ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ತಿರುಗೇಟು ನೀಡಿದರು.

ಗುರುವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರಕಾರಕ್ಕೆ ಸೂತಕದ ಛಾಯೆ ಬಂದಿದೆ ಎನ್ನುವ ವಿಪಕ್ಷ ನಾಯಕ ಆರ್.ಅಶೋಕ್ ಕನ್ನಡಿ ಮುಂದೆ ನಿಂತು ತಮ್ಮ ಮುಖ ಒಮ್ಮೆ ನೋಡಿಕೊಂಡರೆ ಯಾರಿಗೆ ಸೂತಕದ ಛಾಯೆ ಬಂದಿದೆ ಎನ್ನುವುದನ್ನು ಅರಿಯಬಹುದು ಎಂದು ಹೇಳಿದರು.

ವಿರೋಧ ಪಕ್ಷದ ನಾಯಕರಾಗಿ ಯಾವ ಸಂದರ್ಭದಲ್ಲಿ ಏನು ಮಾತನಾಡಬೇಕು ಎನ್ನುವುದು ಇವರಿಗೆ ಗೊತ್ತಿಲ್ಲ. ಕೇವಲ ಚಲಾವಣೆ ಇಲ್ಲದ ವಿಚಾರಗಳನ್ನು ತೆಗೆದುಕೊಂಡು ಮಾತನಾಡುತ್ತಾರೆ. ಯಾವುದೇ ವಿಚಾರದ ಬಗ್ಗೆ ಇವರಿಗೆ ಸ್ಪಷ್ಟತೆ ಇಲ್ಲವಾಗಿದೆ. ಇಂತಹ ವ್ಯಕ್ತಿಯನ್ನು ವಿರೋಧ ಪಕ್ಷದ ನಾಯಕನಾಗಿ ನೇಮಕ ಮಾಡಿರುವುದಕ್ಕೆ ಬಿಜೆಪಿಯು ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಅವರು ಆಗ್ರಹಿಸಿದರು.

ವಿಪಕ್ಷ ನಾಯಕರಾಗಿ ಕೆಲಸ ಮಾಡುವವರು ಆರೋಪಗಳಿಂದ ಮುಕ್ತರಾಗಿರಬೇಕು. ಆದರೆ ಇವರು ಆರೋಪ ಮುಕ್ತರಾಗಿ ಇದ್ದಾರೆಯೇ?. ಇವರು ಸರಕಾರವನ್ನು ಪ್ರಶ್ನೆ ಮಾಡುವ ನೈತಿಕತೆ ಉಳಿಸಿಕೊಂಡಿದ್ದಾರೆಯೇ?. ಕೆಂಗೇರಿ ಹೋಬಳಿಯ ಬಿ.ಎಂ.ಕಾವಲಿಗೆ ಸಂಬಂಧಪಟ್ಟಂತೆ ಇವರು ಬಗರ್ ಹುಕುಂ ಸಮಿತಿ ಅಧ್ಯಕ್ಷರಾಗಿದ್ದಾಗ 2,500 ಎಕರೆ ಭೂಮಿ ಹಂಚಿಕೆಯಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ. ಇವರ ಮೇಲೆ ಬಿಎಂಟಿಎಫ್ ನಲ್ಲಿ ಪ್ರಕರಣ ದಾಖಲಾಗಿದೆ ಎಂದು ಅವರು ಹೇಳಿದರು.

ಅಶೋಕ್ ತಮ್ಮ ವಿರುದ್ಧ ದಾಖಲಾಗಿದ್ದ ಎಫ್‍ಐಆರ್ ಅನ್ನು ರದ್ದು ಮಾಡಬೇಕು ಎಂದು ರೀ ಪಿಟಿಷನ್ ದಾಖಲು ಮಾಡುತ್ತಾರೆ. ಹೈಕೋರ್ಟ್ ಆ ಅರ್ಜಿ ವಜಾ ಮಾಡಿ, ಈ ಪ್ರಕರಣದ ತನಿಖೆ ಆಗಲೇಬೇಕು ಎಂದು ಹೇಳುತ್ತದೆ. ನಂತರ ಸುಪ್ರೀಂ ಕೋರ್ಟಿಗೆ ಹೋದ ಪ್ರಕರಣದ ಮುಂದಿನ ಮಾಹಿತಿ ಯಾರಿಗೂ ತಿಳಿದಿಲ್ಲ ಎಂದು ರಮೇಶ್ ಬಾಬು ತಿಳಿಸಿದರು.

ಅಶೋಕ್ ಡಿನೋಟಿಫಿಕೇಶನ್ ಪ್ರಕರಣದಲ್ಲಿಯೂ ಆರೋಪಿ. ಬಗರ್ ಹುಕುಂ ಜಮೀನು ಹಂಚಿಕೆ ಹಗರಣದ ಕುರಿತು ಕಾಂಗ್ರೆಸ್ ಸರಕಾರ ಸಮಗ್ರ ತನಿಖೆ ನಡೆಸಬೇಕು. ಮಾರ್ಕೋಪೋಲೊ 143 ಬಸ್ ಖರೀದಿ ಹಗರಣ, ಕಟ್ಟಡ ನಿರ್ಮಾಣ ಹಗರಣದ ಬಗ್ಗೆ ಈವರೆಗೆ ಅಶೋಕ್ ಚಕಾರವೆತ್ತಿಲ್ಲ ಎಂದು ಅವರು ಟೀಕಿಸಿದರು.

ರಾಜ್ಯದ ಇತಿಹಾಸದಲ್ಲೆ ಅತ್ಯಂತ ಕಳಂಕಿತ ಹಾಗೂ ಆರೋಪ ಹೊತ್ತುಕೊಂಡಿರುವ ವಿರೋಧ ಪಕ್ಷದ ನಾಯಕ ಅಶೋಕ್. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರೇ ಅಶೋಕ್ ಅವರ ಅಕ್ರಮಗಳ ವಿರುದ್ಧ ಸಮಗ್ರ ತನಿಖೆ ನಡೆಸಬೇಕು. ವಿಪಕ್ಷ ನಾಯಕರಿಗೆ ಇದ್ದಂತಹ ಘನತೆ ಗೌರವಗಳನ್ನು ಅಶೋಕ್ ಹಾಳು ಮಾಡುತ್ತಿದ್ದಾರೆ ಎಂದು ರಮೇಶ್ ಬಾಬು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಹಾಗೂ ಸಂವಹನ ಕಾರ್ಯದರ್ಶಿ ದೀಪಕ್ ತಿಮಯ್ಯ, ಮಾಜಿ ಮೇಯರ್ ರಾಮಚಂದ್ರಪ್ಪ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News