ಸಿಎಂ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ | ಬಿಜೆಪಿಯ ಋಣ ಸಂದಾಯದ ಮಾಡಲು ಹೊರಟಿರುವ ಎಸ್.ಎಲ್.ಭೈರಪ್ಪ : ರಮೇಶ್ ಬಾಬು
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಸಾಹಿತಿ ಎಸ್.ಎಲ್.ಭೈರಪ್ಪ ಅವರು ಸಮರ್ಥಿಸಲು ಹೊರಟಿರುವುದು ಅವರ ಮನಸ್ಥಿತಿಗೆ ಹಿಡಿದ ಕನ್ನಡಿ ಆಗಿದೆ. ಕೇಂದ್ರ ಸರಕಾರದಿಂದ ಅವರು ಪಡೆದಿರುವ ಆರು ಪ್ರಶಸ್ತಿಗಳಲ್ಲಿ 5 ಪ್ರಶಸ್ತಿಗಳು ಬಿಜೆಪಿ ಕಾರಣದಿಂದಲೇ ದೊರಕಿದ್ದು, ಋಣ ಸಂದಾಯದ ಕಾರಣಕ್ಕಾಗಿ ರಾಜ್ಯ ಸರಕಾರವನ್ನು ಟೀಕಿಸಿ ರಾಜ್ಯಪಾಲರನ್ನು ಸಮರ್ಥಿಸಿ, ಅರೆ ಸಂವಿಧಾನ ತಜ್ಞರಾಗಲು ಹೊರಟಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಟೀಕಿಸಿದ್ದಾರೆ.
ರವಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಸುಪ್ರಿಂ ಕೋರ್ಟ್ ಇತ್ತೀಚಿಗೆ ಆದೇಶವನ್ನು ನೀಡಿ ರಾಜ್ಯಪಾಲರ ಸಂವಿಧಾನ ಬಾಹಿರ ಕಾರ್ಯಗಳಿಗೆ ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸಿರುತ್ತದೆ. ಇದೆ ಪ್ರಕರಣದಲ್ಲಿ ರಾಜ್ಯಪಾಲರು ವಿಧೇಯಕಗಳನ್ನು ತಡೆಹಿಡಿಯುವುದು ಸರಿಯಾದ ಕ್ರಮ ಅಲ್ಲವೆಂದು ಹೇಳಿರುತ್ತದೆ. ಪಶ್ಚಿಮ ಬಂಗಾಳ, ಕೇರಳ, ಪಂಜಾಬ್, ತೆಲಂಗಾಣ, ಛತ್ತಿಸ್‍ಗಡ್ ಮತ್ತು ತಮಿಳುನಾಡು ಪ್ರಕರಣಗಳಲ್ಲಿ ರಾಜ್ಯಪಾಲರುಗಳ ನಡೆಯನ್ನು ಸರಿ ಅಲ್ಲವೆಂದು ನ್ಯಾಯಾಲಯ ಹೇಳಿರುತ್ತದೆ ಎಂದು ಉಲ್ಲೇಖಿಸಿದ್ದಾರೆ.
ಮಧ್ಯಪ್ರದೇಶ ಹೈಕೋರ್ಟ್ ತನ್ನ ತೀರ್ಪಿನಲ್ಲಿ ರಾಜ್ಯಪಾಲರು ಸಂವಿಧಾನದ ನಿಯಮಗಳಿಗೆ ಮತ್ತು ಪ್ರಜಾಪ್ರಭುತ್ವದ ಆಶಯಗಳಿಗೆ ಅನುಗುಣವಾಗಿ ತಮ್ಮ ತೀರ್ಮಾನವನ್ನು ತೆಗೆದುಕೊಳ್ಳಬೇಕೇ? ಹೊರತು ತಮ್ಮ ವೈಯಕ್ತಿಕ ಅನಿಸಿಕೆಗಳಿಗೆ ಅನುಗುಣವಾಗಿ ಆದೇಶಗಳನ್ನು ನೀಡುವುದು ಅಥವಾ ವರ್ತಿಸುವುದು ತಪ್ಪೆಂದು ಸ್ಪಷ್ಟವಾಗಿ ಹೇಳಿರುತ್ತದೆ. ಸ್ವಯಂ ಘೋಷಿತ, ವಿಶ್ವ ವಿಖ್ಯಾತ ಸಾಹಿತಿ ಅರೆ ಸಂವಿಧಾನ ತಜ್ಞ ಎಸ್.ಎಲ್.ಭೈರಪ್ಪನವರಿಗೆ ನ್ಯಾಯಪೀಠಗಳ ತೀರ್ಪುಗಳನ್ನು ಓದಲು ಬಹುಶಃ ಸಮಯದ ಕೊರತೆ ಇರಬಹುದು? ಭೈರಪ್ಪನವರು ಬಿಜೆಪಿ ಕೇಂದ್ರ ಸರಕಾರದಲ್ಲಿ ರಾಜ್ಯಪಾಲರ ಹುದ್ದೆಯ ಆಮಿಷವನ್ನೂ ಪಡೆದಿರಬಹುದು’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
‘ಬೈರಪ್ಪನವರ ಸಾಹಿತ್ಯವನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಅನೇಕರು ಟೀಕಿಸಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರೊ.ಯು.ಆರ್.ಅನಂತಮೂರ್ತಿ ಅವರು ಇವರ ‘ಆವರಣ’ ಕೃತಿಯ ಬಗ್ಗೆ ತಮ್ಮ ಅಭಿಪ್ರಾಯ ನೀಡಿ, ಬೈರಪ್ಪನವರ ಸಾಹಿತ್ಯ ಅಪಾಯಕಾರಿ ಮತ್ತು ಇವರ ಸಾಹಿತ್ಯ ಸಮಾಜಕ್ಕೆ ಮತ್ತು ಸಮುದಾಯಗಳಿಗೆ ಪೂರಕವಲ್ಲ ಎಂದು ಹೇಳಿದ್ದರು.
ಕೇಂದ್ರದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಭೈರಪ್ಪನವರು ತಮ್ಮ ಸಾಹಿತ್ಯ ಮತ್ತು ಅಭಿಪ್ರಾಯಗಳನ್ನು ಸಂಪೂರ್ಣವಾಗಿ ಬಿಜೆಪಿಮಯಗೊಳಿಸಿದ್ದಾರೆ. ಮೊದಲಿನಿಂದಲೂ ಮೂಲಭೂತವಾದಗಳಿಗೆ ತಮ್ಮ ಸಾಹಿತ್ಯವನ್ನು ಸಮರ್ಪಣೆಗೊಳಿಸಿಕೊಂಡಿರುವ ಭೈರಪ್ಪನವರು, ರಾಜ್ಯಪಾಲರ ನಡೆಯನ್ನು ಪ್ರಶ್ನಿಸಬಾರದೆಂದು ಹೇಳಿರುವುದು ಅವರ ಮನಸ್ಥಿಗೆಗೆ ಅನುಗುಣವಾಗಿ ಇರುತ್ತದೆ. ಭೈರಪ್ಪ ಇಂತಹ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡುವ ಬದಲು ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳ ಚಟುವಟಿಕೆಗಳಲ್ಲಿ ಹೇಳಿದರೆ ಹೆಚ್ಚು ಚಪ್ಪಾಳೆ ಗಿಟ್ಟಿಸಬಹಹುದು ಎಂದು ಅವರು ಲೇವಡಿ ಮಾಡಿದ್ದಾರೆ.
ನಮ್ಮ ದೇಶದಲ್ಲಿ ಬೊಮ್ಮಾಯಿ ಪ್ರಕರಣವನ್ನು ಒಳಗೊಂಡಂತೆ ಇತ್ತೀಚಿನ ತಮಿಳುನಾಡು ರಾಜ್ಯಪಾಲರ ಪ್ರಕರಣದವರೆಗೆ ಸುಪ್ರೀಂ ಕೋರ್ಟ್ ಹಲವಾರು ತೀರ್ಪುಗಳನ್ನು ನೀಡಿರುತ್ತದೆ ಮತ್ತು ರಾಜ್ಯಪಾಲರ ನಡೆ ಒಕ್ಕೂಟ ವ್ಯವಸ್ಥೆಗೆ ಪೂರಕವಾಗಿರಬೇಕು ಮತ್ತು ಸಂವಿಧಾನದ ಅಡಿಯಲ್ಲಿ ದತ್ತವಾದ ಅಧಿಕಾರಗಳನ್ನು ಮಾತ್ರ ಚಲಾಯಿಸಬೇಕು ಎಂದು ಹೇಳಿರುತ್ತದೆ.
ರಾಜ್ಯಪಾಲರು ಚುನಾಯಿತ ಸರಕಾರಗಳ ಮೇಲೆ ಸವಾರಿ ಮಾಡಲು ಹೊರಟರೆ ಅದು ಜನಾಭಿಪ್ರಾಯಕ್ಕೆ ಮತ್ತು ಜನತಂತ್ರಕ್ಕೆ ಅಪಚಾರವಾಗುತ್ತದೆ. ರಾಜ್ಯಪಾಲರು ಕೇಂದ್ರ ಸರಕಾರಗಳ ಸೂಚನೆಗಳಿಗೆ ಅನುಗುಣವಾಗಿ ರಾಜ್ಯ ಸರಕಾರಗಳ ಆಡಳಿತದಲ್ಲಿ ಮೂಗು ತೂರಿಸಲು ಅವಕಾಶವಿಲ್ಲವೆಂದು ಸಂವಿಧಾನ ಮತ್ತು ನ್ಯಾಯಾಲಯಗಳು ಸ್ಪಷ್ಟವಾಗಿ ತಿಳಿಸಿರುತ್ತವೆ. ಆದರೆ, ವಿಶ್ವ ವಿಖ್ಯಾತ ಸಾಹಿತಿಗಳಿಗೆ ಜಾಣ ಕುರುಡುತನ ಮತ್ತು ಕಿವುಡುತನ ಒಮ್ಮೊಮ್ಮೆ ಆವರಿಸಿಕೊಳ್ಳುತ್ತದೆ ಎಂದು ಅವರು ಟೀಕಿಸಿದ್ದಾರೆ.
ಎಸ್.ಎಲ್.ಭೈರಪ್ಪನವರು ಇಂತಹ ವಿಷಯಕ್ಕೆ ಮೂಗು ತೂರಿಸಿ ಮಾತನಾಡುವ ಬದಲು ಬಿಜೆಪಿಯ ಯಾವುದಾದರೂ ಹುದ್ದೆಯನ್ನು ಬೇಡಿ ಪಡೆದುಕೊಂಡು ರಾಜಕೀಯ ಹೇಳಿಕೆಗಳನ್ನು ನೀಡಿದರೆ ಅದು ಸರಿಯಾದ ಕ್ರಮವಾಗುತ್ತದೆ. ಕೇವಲ ಯಾರನ್ನೋ ಮೆಚ್ಚಿಸಲು ಇಂತಹ ಹೇಳಿಕೆಗಳನ್ನು ನೀಡಿ ನಗೆಪಾಟಲಿಗೆ ಗುರಿಯಾಗಿ ಬೆತ್ತಲಾಗುವುದು ಬೇಡ. ಬಹುಶಃ ಇಂತಹ ಹೇಳಿಕೆಗಳ ಮೂಲಕ ಕೇಂದ್ರ ಸರಕಾರದ ಅಧೀನದಲ್ಲಿ ಬರುವ ವಿಶ್ವವಿದ್ಯಾಲಯಗಳಿಂದ ಮತ್ತೊಂದು ಗೌರವ ಡಾಕ್ಟರೇಟ್ ಪದವಿಯ ನಿರೀಕ್ಷೆಯನ್ನು ಇಟ್ಟುಕೊಂಡಿರಬಹುದು. ಭೈರಪ್ಪನವರ ಈ ಹೇಳಿಕೆಗೆ ಬಿಜೆಪಿ ಆಡಳಿತದ ವಿವಿಗಳು ಗೌರವ ಡಾಕ್ಟರೇಟ್ ನೀಡಿದರೂ ಆಶ್ಚರ್ಯವಿಲ್ಲ ಎಂದು ರಮೇಶ್ ಬಾಬು ವ್ಯಂಗ್ಯವಾಡಿದ್ದಾರೆ.