‘ಭಾಗ್ಯಲಕ್ಷ್ಮಿ’ ಉಚಿತ ಸೀರೆ ಹಂಚಿಕೆಯಲ್ಲಿ 23 ಕೋಟಿ ರೂ. ಹಗರಣ : ರಮೇಶ್ ಬಾಬು

Update: 2024-09-05 13:50 GMT

ಬೆಂಗಳೂರು : ಬಿಜೆಪಿ ಸರಕಾರದ ಆಡಳಿತಾವಧಿಯಲ್ಲಿ 2011ರಲ್ಲಿ ಭಾಗ್ಯಲಕ್ಷ್ಮಿ ಯೋಜನೆಯ ಅಡಿ ಉಚಿತ ಸೀರೆ ಹಂಚಿಕೆಯಲ್ಲಿ 23 ಕೋಟಿ ರೂ. ಹಗರಣ ನಡೆದಿದೆ. ಸುಮಾರು 10 ಲಕ್ಷ ಸೀರೆಗಳನ್ನು ಹಂಚಿಕೆ ಮಾಡಲಾಗಿತ್ತು. 100 ರೂ.ಮುಖಬೆಲೆಯ ಸೀರೆಗಳಿಗೆ ಹೆಚ್ಚು ಬೆಲೆ ಕೊಟ್ಟು ಸೂರತ್ ನಿಂದ ತರಿಸಲಾಗಿತ್ತು ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಆರೋಪಿಸಿದರು.

ಗುರುವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಹಗರಣದ ಬಗ್ಗೆ ವಿಧಾನ ಪರಿಷತ್ ನಲ್ಲಿ ಮೋಟಮ್ಮ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಚರ್ಚೆಯಾಗಿದೆ. ಸದಸ್ಯರಾಗಿದ್ದ ಯು.ಬಿ.ವೆಂಕಟೇಶ್ ಹಾಗೂ ದಯಾನಂದ ಅವರು ಇದರ ಬಗ್ಗೆ ಸುಧೀರ್ಘ ಚರ್ಚೆ ನಡೆಸಿದ್ದರು ಎಂದು ಹೇಳಿದರು.

ಈ ಹಗರಣದ ಬಗ್ಗೆ ತನಿಖೆ ಆಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆಯಲಾಗಿದೆ. ರಾಜಸ್ಥಾನದಿಂದ ಬಂದಿರುವ ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಕರ್ನಾಟಕದ ಹಿತ ಕಾಪಾಡುತ್ತಾರೋ ಅಥವಾ ರಾಜಸ್ಥಾನದ ಹಿತ ಕಾಪಾಡುತ್ತಾರೋ ನೋಡಬೇಕು. ಅಕ್ರಮಗಳ ಬಗ್ಗೆ ಮಾತನಾಡುವ ಅವರು ಈ ಸೀರೆ ಹಗರಣದ ಬಗ್ಗೆ ದನಿ ಎತ್ತಬೇಕು, ತನಿಖೆ ನಡೆಸಿ ಎಂದು ಸಿಎಂಗೆ ಪತ್ರ ಬರೆಯಬೇಕು ಎಂದು ರಮೇಶ್ ಬಾಬು ಆಗ್ರಹಿಸಿದರು.

ಶಾಲೆ ನಡೆಸುತ್ತೇನೆ ಎಂದು ಬಿರಿಯಾನಿ ಹೋಟೆಲ್ ನಡೆಸುತ್ತಿರುವ ಛಲವಾದಿ ನಾರಾಯಣಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲು ಕಾಂಗ್ರೆಸ್ ಪಕ್ಷದ ಎರಡನೇ ಸಾಲಿನ ನಾಯಕರು ಹೋಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಾಲಿಶ ಮಾತುಗಳನ್ನು ಆಡಿದ್ದಾರೆ. ಅವರಿಗೆ ಅಮೇರಿಕಾ ಅಧ್ಯಕ್ಷರು ಬಂದು ದೂರು ನೀಡಬೇಕು ಎಂದು ನಿರೀಕ್ಷೆ ಮಾಡಿದ್ದರು ಎನಿಸುತ್ತದೆ ಎಂದು ಅವರು ವ್ಯಂಗ್ಯವಾಡಿದರು.

ವಿಜಯೇಂದ್ರ ಬಾಲಭವನದ ನಾಯಕ: ವಿಜಯೇಂದ್ರ, ಆರ್.ಅಶೋಕ್, ಸಂಸದ ಡಾ.ಕೆ.ಸುಧಾಕರ್, ಅಶ್ವಥ್ ನಾರಾಯಣ ಜಗನ್ನಾಥ ಭವನ(ಬಿಜೆಪಿ ರಾಜ್ಯ ಕಚೇರಿ)ದ ನಾಯಕರಲ್ಲ ಬಾಲಭವನದ ನಾಯಕರು ಎಂದು ಜಗನ್ನಾಥ ಭವನದ ನಾಯಕರಾದ ಬಿ. ಎಲ್.ಸಂತೋಷ, ಸಿ.ಟಿ.ರವಿ, ಬಸನಗೌಡ ಪಾಟೀಲ್ ಯತ್ನಾಳ್, ರವಿಕುಮಾರ್ ಹೇಳುತ್ತಿದ್ದಾರೆ ಎಂದು ರಮೇಶ್ ಬಾಬು ತಿಳಿಸಿದರು.

ವಿಜಯೇಂದ್ರ ತಮ್ಮ ತಂದೆಯ ನಕಲಿ ಸಹಿ ಮಾಡಿ ಅವ್ಯವಹಾರ ಮಾಡಿದ ಆರೋಪ ಹೊತ್ತಿದ್ದಾರೆ. ಎಚ್.ವಿಶ್ವನಾಥ್ 20 ಸಾವಿರ ಕೋಟಿ ರೂ.ಗಳ ನೀರಾವರಿ ಹಗರಣದ ಆರೋಪ ಮಾಡಿದ್ದರು. ಯತ್ನಾಳ್ ಹಾಗೂ ಅರವಿಂದ ಬೆಲ್ಲದ ಹೈಕಮಾಂಡ್‍ಗೆ ಪತ್ರ ಬರೆದಿದ್ದರು. ಒಂದು ಪಕ್ಷದ ಅಧ್ಯಕ್ಷರಾದ ವಿಜಯೇಂದ್ರ ಈ ಆರೋಪಗಳ ಮೇಲೆ ತನಿಖೆ ನಡೆಸಿ ಎಂದು ಸಿಎಂ ಗೆ ಪತ್ರ ಬರೆಯಲಿ ಎಂದು ಅವರು ಆಗ್ರಹಿಸಿದರು.

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, ಟಿ.ಜೆ.ಅಬ್ರಹಾಂ, ಪ್ರದೀಪ್ ಕುಮಾರ್, ಸ್ನೇಹಮಯಿ ಕೃಷ್ಣ ಮುಡಾ ಪ್ರಕರಣದಲ್ಲಿ ನೀಡಿರುವ ದೂರಿನ ಆಧಾರದ ಮೇಲೆ ಮುಖ್ಯಮಂತ್ರಿ ವಿರುದ್ಧ ಸೆಕ್ಷನ್ 17 ಎ ಅಡಿ ತನಿಖೆ ನಡೆಸಲು ಸೂಚಿಸಲಾಗಿದೆ. ಇವರು ಸುಪ್ರೀಂ ಕೋರ್ಟಿನಲ್ಲಿ ಹೇಗೆ ಶುಲ್ಕ ಕಟ್ಟುತ್ತಾರೆ. ಅಷ್ಟೊಂದು ಹಣ ಇವರ ಬಳಿ ಇದೆಯೇ? ಎಂದು ಪ್ರಶ್ನಿಸಿದರು.

ಸ್ನೇಹಮಯಿ ಕೃಷ್ಣ ಮೇಲೆ ಮೈಸೂರು ನಗರ ಒಂದರಲ್ಲಿ 22 ಎಫ್‍ಐಆರ್ ಗಳಾಗಿವೆ. ಈತ ಒಂದೇ ವರ್ಷದಲ್ಲಿ 110 ಅರ್ಜಿಗಳ ಮೂಲಕ ದಾಖಲಾತಿಯನ್ನು ಪಡೆದುಕೊಂಡಿದ್ದಾರೆ. ಸ್ನೇಹಮಯಿ ಕೃಷ್ಣ ಭೂ ಹಗರಣಗಳನ್ನು ಸೃಷ್ಟಿ ಮಾಡಿ ಅದಕ್ಕೆ ಸಂಬಂಧಪಟ್ಟವರಿಗೆ ಕಿರುಕುಳ ನೀಡುವ ವ್ಯಕ್ತಿ. ಅಮಾಯಕ ಭೂಮಾಲಕರನ್ನು ಹೆದರಿಸಿ ಸಣ್ಣ ಪುಟ್ಟ ಜಗಳಗಳನ್ನು ಸೃಷ್ಟಿ ಮಾಡಿ ಕಾನೂನನ್ನು ದುರುಪಯೋಗ ಮಾಡಿಕೊಂಡಿರುವ ವ್ಯಕ್ತಿ ಎಂದು ಅವರು ದೂರಿದರು.

ಈತ ಕೊಟ್ಟ ಕಿರುಕುಳಕ್ಕೆ ಮೈಸೂರಿನ ಕುವೆಂಪು ನಗರದ ಮಹಿಳೆ ಮಾನಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರ್‍ಟಿಐ ನಲ್ಲಿ ದಾಖಲೆ ಪಡೆಯುವುದು, ಅದಕ್ಕೆ ವೈಟ್ನರ್ ಹಾಕುವುದು, ನಕಲಿ ಸೀಲುಗಳನ್ನು ಹಾಕಿ ದಾಖಲೆ ಸೃಷ್ಟಿ ಮಾಡುವುದು ಹೀಗೆ ಈತ ನಕಲಿಗಳ ಸರದಾರ. ಮುಡಾ ಪ್ರಕರಣದಲ್ಲಿ ಒಂದಷ್ಟು ನಕಲಿ ದಾಖಲೆ ಸೃಷ್ಟಿ ಮಾಡಿದ್ದಾನೆ ಎಂದು ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ. ಆದರೆ ಇದುವರೆರೆಗೂ ಕ್ರಮ ತೆಗೆದುಕೊಂಡಿಲ್ಲ ಎಂದು ಲಕ್ಷ್ಮಣ್ ಹೇಳಿದರು.

ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸ್ ಪೇದೆಯ ವಿಡಿಯೋ ಚಿತ್ರೀಕರಣ ಮಾಡಿ ಅಶ್ಲೀಲವಾಗಿ ಬಿಂಬಿಸಿದ ಪ್ರಕರಣ ಈತನ ಮೇಲಿದೆ. ಈತನ ಮೇಲೆ ಮೈಸೂರು ನಗರ, ಗ್ರಾಮಾಂತರ ಸೇರಿ 44 ಪ್ರಕರಣಗಳು ದಾಖಲಾಗಿವೆ. ಸ್ನೇಹಮಯಿ ಕೃಷ್ಣ ನೀಡಿದ್ದ ದಾಖಲೆಗಳನ್ನೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದು ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News