ವಿಜಯೇಂದ್ರ ಅಧ್ಯಕ್ಷರಾದ ಬಳಿಕ ಬಿಜೆಪಿಯಲ್ಲಿ ಮೂರು ಗುಂಪು : ರಮೇಶ್ ಬಾಬು

Update: 2024-09-08 15:57 GMT

ಬೆಂಗಳೂರು : ಬಿ.ವೈ.ವಿಜಯೇಂದ್ರ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರಾದ ಬಳಕ ಬಿಜೆಪಿಯಲ್ಲಿ ಮೂರು ಗುಂಪುಗಳು ಸೃಷ್ಟಿಯಾಗಿವೆ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ತಿಳಿಸಿದ್ದಾರೆ.

ರವಿವಾರ ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೂಲ ಬಿಜೆಪಿಗರು ಮತ್ತು ಯಡಿಯೂರಪ್ಪ ಅವರ ವಿರೋಧಿ ಗುಂಪು ಇಂದಿಗೂ ವಿಜಯೇಂದ್ರರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರೆಂದು, ಆರ್.ಅಶೋಕ್‍ರನ್ನು ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕರೆಂದು ಒಪ್ಪಲು ತಯಾರಿಲ್ಲ ಎಂದಿದ್ದಾರೆ.

ವಿಜಯೇಂದ್ರ ಅವರ ವಿರೋಧಿ ಗುಂಪು ತಮ್ಮನ್ನು ತಾವು ಬಿಜೆಪಿ ಪಕ್ಷದಲ್ಲಿ ಜಗನ್ನಾಥ ಭವನದ ಗುಂಪೆಂದು ಗುರುತಿಸಿಕೊಂಡು, ವಿಜಯೇಂದ್ರ ಗುಂಪನ್ನು ಬಾಲಭವನದ ಗುಂಪೆಂದು ಅಪಹಾಸ್ಯ ಮಾಡುತ್ತಿದೆ. ಪಕ್ಷದಲ್ಲಿನ ಗುಂಪುಗಾರಿಕೆಯನ್ನು ನಿಭಾಯಿಸಲು ವಿಫಲರಾಗಿ ಕೈಚೆಲ್ಲಿರುವ ಅಧ್ಯಕ್ಷ ವಿಜಯೇಂದ್ರ ಅವರು ಪಕ್ಷದ ಸದಸ್ಯತ್ವ ಅಭಿಯಾನದ ನಾಟಕಕ್ಕೆ ಚಾಲನೆ ನೀಡಿದ್ದಾರೆ ಎಂದು ರಮೇಶ್‍ಬಾಬು ಟೀಕಿಸಿದ್ದಾರೆ.

2023ರ ಚುನಾವಣೆಯಲ್ಲಿ ಕೇವಲ ಒಂದು ಕೋಟಿ ನಲವತ್ತು ಲಕ್ಷ ಮತಗಳನ್ನು ಪಡೆದಿರುವ ಬಿಜೆಪಿ, ಒಂದೂವರೆ ಕೋಟಿ ಸದಸ್ಯತ್ವ ಅಭಿಯಾನದ ಪುಂಗಿ ಊದುತ್ತಿದೆ. ಬಿಜೆಪಿ ಬಾಲಭವನದ ನಾಯಕ ವಿಜಯೇಂದ್ರ ಅವರು ಪಕ್ಷದಲ್ಲಿ ಭಿನ್ನಮತೀಯ ಚಟುವಟಿಕೆಯನ್ನು ನಿಯಂತ್ರಿಸಲು ಸಾಧ್ಯವಾಗದೆ, ಇಂತಹ ಘೋಷಣೆಗಳ ಮೂಲಕ ತಮ್ಮ ನಾಯಕತ್ವವನ್ನು ಸಾಬೀತುಪಡಿಸಿಕೊಳ್ಳಲು ಹೆಣಗುತ್ತಿದ್ದಾರೆ ಎಂದು ರಮೇಶ್‍ಬಾಬು ಹೇಳಿದ್ದಾರೆ.

ಕೇಂದ್ರದ ಸರಕಾರ ದೇಶದಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಪೂರೈಸುವಲ್ಲಿ ವಿಫಲಗೊಂಡಿರುತ್ತದೆ. ದೇಶದ ಹಸಿವಿನ ಸೂಚ್ಯಂಕ ಮೋದಿ ನಾಯಕತ್ವದಲ್ಲಿ ದಿನೇ ದಿನೇ ಮೇಲೆಕ್ಕೆ ಏರುತ್ತಿದೆ. ಪ್ರಧಾನಿ ಮೋದಿ ಸರಕಾರದ ತಪ್ಪು ನಿರ್ಧಾರಗಳಿಂದ ಮಕ್ಕಳ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಪ್ರಚಾರ ಪಡೆದುದನ್ನು ಹೊರತುಪಡಿಸಿ ಯಾವುದೇ ನಗರ ಪ್ರದೇಶ ನಿಗದಿತ ಪ್ರಮಾಣದಲ್ಲಿ ಪ್ರಗತಿಯನ್ನು ಸಾಧಿಸಿರುವುದಿಲ್ಲ. ಆದರೆ ಮಕ್ಕಳ ಸಾವಿನ ಹೆಸರಿನಲ್ಲೂ ಪೊರಕೆ ಹಿಡಿದು ಬಿಜೆಪಿ ಸರಕಾರ ಪ್ರಚಾರ ಗಿಟ್ಟಿಸಲು ಹೊರಟಿದೆ ಎಂದು ರಮೇಶ್‍ಬಾಬು ದೂರಿದ್ದಾರೆ.

ಕರ್ನಾಟಕದಲ್ಲಿ ಬಿ.ಎಲ್ ಸಂತೋಷ್ ಅವರ ಮಾರ್ಗದರ್ಶನದಲ್ಲಿ ಬಸವರಾಜ್ ಬೊಮ್ಮಾಯಿ, ವಿ.ಸೋಮಣ್ಣ, ಬಸವರಾಜ್ ಪಾಟೀಲ್ ಯತ್ನಾಳ್, ಸದಾನಂದ ಗೌಡ, ಅರವಿಂದ ಬೆಲ್ಲದ್, ಸಿ.ಟಿ.ರವಿ, ರವಿಕುಮಾರ್, ಸುನಿಲ್ ಕುಮಾರ್, ಶೋಭಾ ಕರಂದ್ಲಾಜೆ ಮುಂತಾದವರು ಜಗನ್ನಾಥ ಭವನದ ತಂಡವಾಗಿ ಗುರುತಿಸಿಕೊಂಡಿದ್ದಾರೆ ಎಂದು ರಮೇಶ್‍ಬಾಬು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News