ʼಬಿಬಿಎಂಪಿ ತೆರಿಗೆ ಸಂಗ್ರಹʼ: ಮೇಲ್ಮನವಿ ಸಲ್ಲಿಸಲು ಸಿಎಂಗೆ ರಮೇಶ್ ಬಾಬು ಮನವಿ

Update: 2023-12-20 15:14 GMT
ಬೆಂಗಳೂರು: ಬಿಬಿಎಂಪಿಯ ತೆರಿಗೆ ಸಂಗ್ರಹ ವಿಚಾರದಲ್ಲಿ ಹೈಕೋರ್ಟ್ ಏಕಸದಸ್ಯ ಪೀಠ ನೀಡಿರುವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೆಪಿಸಿಸಿ ವಕ್ತಾರ ರಮೇಶ್ ಬಾಬು ಮನವಿ ಮಾಡಿದ್ದಾರೆ.
ಬುಧವಾರ ಈ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಅವರು, ಹೈಕೋರ್ಟ್ ಏಕ ಸದಸ್ಯ ಪೀಠವು ಡಿ.18ರಂದು ಪ್ರಕರಣವೊಂದರಲ್ಲಿ ಬಿಬಿಎಂಪಿಯು ನಿರ್ಮಾಣ ಕಾರ್ಯ ಪೂರ್ಣಗೊಳಿಸಿದ ಬಳಿಕ ಕಟ್ಟಡಕ್ಕೆ ಸ್ವಾಧೀನ ಅನುಭವ ಪತ್ರ ನೀಡಿದ ನಂತರ ಮಾತ್ರ ಸದರಿ ಕಟ್ಟಡಕ್ಕೆ ತೆರಿಗೆ ವಿಧಿಸಬಹುದು ಎಂದು ಆದೇಶ ನೀಡಿದೆ ಎಂದು ತಿಳಿಸಿದ್ದಾರೆ. 
ಬಿಬಿಎಂಪಿ ನಿಯಮಾನುಸಾರ ಒಂದು ಕಟ್ಟಡ ನಿರ್ಮಾಣಕ್ಕೆ ಅನುಮತಿ ಪತ್ರ ನೀಡಿದ ಸಂದರ್ಭದಲ್ಲಿ ಕಟ್ಟಡ ಕಾಮಗಾರಿಯನ್ನು ಒಂದು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಲಿಖಿತವಾಗಿ ನಮೂದಿಸಿರುತ್ತದೆ. ಬಹುತೇಕ ಸಂದರ್ಭಗಳಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಂಡ ನಂತರ ಕಟ್ಟಡ ಮಾಲಕರು ಸ್ವಾಧೀನ ಅನುಭವ ಪತ್ರ ಪಡೆಯುವುದಿಲ್ಲ ಅಥವಾ ಕಾಮಗಾರಿ ಪೂರ್ಣಗೊಳಿಸಿದ ಮಾಹಿತಿಯನ್ನು ಲಿಖಿತವಾಗಿ ಬಿಬಿಎಂಪಿಗೆ ತಿಳಿಸುವುದಿಲ್ಲ ಎಂದು ರಮೇಶ್ ಬಾಬು ಹೇಳಿದ್ದಾರೆ.
ವಾಣಿಜ್ಯ ಕಟ್ಟಡ ಅಥವಾ ಅಪಾರ್ಟ್‍ಮೆಂಟ್ ಕಟ್ಟಡಗಳ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ನೀಡಲು ಸ್ವಾಧೀನ ಅನುಭವ ಪತ್ರ (ಒಸಿ/ಸಿಸಿ) ಪಡೆಯಲಾಗುತ್ತಿತ್ತು. ವಾಸದ ಮನೆಯ ಕಟ್ಟಡಗಳಲ್ಲಿ ಇಂತಹ ಅನುಭವ ಪತ್ರ ಇಲ್ಲದೆ ವಿದ್ಯುತ್ ಸಂಪರ್ಕವನ್ನು ನೀಡಲಾಗುತ್ತಿದೆ. ಇನ್ನು ಕೆಲವು ಸಂದರ್ಭಗಳಲ್ಲಿ ವಿದ್ಯುತ್ ಸಂಪರ್ಕಕ್ಕಾಗಿ ಬಿಬಿಎಂಪಿಯ ಹೆಸರಿನಲ್ಲಿ ನಕಲಿ ಪತ್ರಗಳನ್ನು ನೀಡಿ ಸಂಪರ್ಕ ಪಡೆಯಲಾಗಿದೆ ಎಂದು ಅವರು ದೂರಿದ್ದಾರೆ. 
ಬೆಂಗಳೂರಿನ ವಾಸದ, ಅಪಾರ್ಟ್‍ಮೆಂಟ್, ವಾಣಿಜ್ಯ ಕಟ್ಟಡಗಳಲ್ಲಿ ಕಾಮಗಾರಿ ಪೂರ್ಣಗೊಂಡ ನಂತರವೂ ಬಿಬಿಎಂಪಿ ವತಿಯಿಂದ ಸ್ವಾಧೀನ ಪತ್ರವನ್ನು ಅಧಿಕೃತವಾಗಿ ಪಡೆಯುತ್ತಿಲ್ಲ. ಹೈಕೋರ್ಟಿನ ಆದೇಶಕ್ಕೆ ಅನುಗುಣವಾಗಿ ಸ್ವಾಧೀನಪತ್ರ ಬಿಬಿಎಂಪಿ ವತಿಯಿಂದ ನೀಡದ ಹೊರತು, ಕಟ್ಟಡಕ್ಕೆ ತೆರಿಗೆ ಸಂಗ್ರಹ ಸಾಧ್ಯವಿಲ್ಲ. ಒಂದು ವೇಳೆ ಈ ಆದೇಶ ಊರ್ಜಿತವಾದರೆ ಸ್ವಾಧೀನ ಪತ್ರ ಪಡೆಯದ ಆಸ್ತಿಗಳಿಂದ ಬಿಬಿಎಂಪಿ ಕಟ್ಟಡ ತೆರಿಗೆ ನಿಗದಿಗೊಳಿಸಲು, ಪಡೆಯಲು ಅವಕಾಶ ಇರುವುದಿಲ್ಲ ಎಂದು ರಮೇಶ್ ಬಾಬು ಗಮನ ಸೆಳೆದಿದ್ದಾರೆ. 
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಾವು ರಾಜ್ಯ ಸರಕಾರದ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿ, ರಾಜ್ಯ ಹೈಕೋರ್ಟ್ ಏಕ ಸದಸ್ಯ ಪೀಠ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಮತ್ತು ಬಿಬಿಎಂಪಿ ತೆರಿಗೆ ಸಂಗ್ರಹಕ್ಕೆ ಆದ್ಯತೆ ನೀಡಲು ಕ್ರಮ ಕೈಗೊಳ್ಳಬೇಕಾಗಿ ರಮೇಶ್ ಬಾಬು ಕೋರಿದ್ದಾರೆ.
Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News