ಹೈಕೋರ್ಟ್ ತೀರ್ಪಿಗೆ ಅನುಗುಣವಾಗಿ ಪರೀಕ್ಷೆ ನಡೆಸಿ: ರಮೇಶ್ ಬಾಬು ಮನವಿ

Update: 2024-03-07 12:42 GMT

ಬೆಂಗಳೂರು: ಹೈಕೋರ್ಟ್ 5, 8, 9 ಮತ್ತು 11ನೆ ತರಗತಿಗಳ ಉದ್ದೇಶಿತ ವಾರ್ಷಿಕ ಪರೀಕ್ಷೆಯನ್ನು ರದ್ದು ಮಾಡಿ ಆದೇಶಿಸಿದೆ. ನ್ಯಾಯಾಲಯದ ತೀರ್ಪಿನ ವಿರುದ್ಧ ಸರಕಾರ ಯಾವುದೇ ಅಪೀಲು ಸಲ್ಲಿಸದೆ, ಶೈಕ್ಷಣಿಕ ವರ್ಷದ ಕೊನೆಯ ಭಾಗದಲ್ಲಿ ಮಕ್ಕಳನ್ನು ಮಾನಸಿಕ ಒತ್ತಡಕ್ಕೆ ಒಳಪಡಿಸದೆ ತೀರ್ಪಿಗೆ ಅನುಗುಣವಾಗಿ ಪರೀಕ್ಷೆಗಳನ್ನು ನಡೆಸಬೇಕೆಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಮನವಿ ಮಾಡಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಹೈಕೋರ್ಟ್ ಕರ್ನಾಟಕ ಶಿಕ್ಷಣ ಕಾಯಿದೆಗೆ ಅನುಗುಣವಾಗಿ 5, 8, 9 ಮತ್ತು 11ನೆ ತರಗತಿಗೆ ಹಿಂದಿನ ರಾಜ್ಯ ಸರಕಾರದ ಸಂಕಲನಾತ್ಮಕ ಮೌಲ್ಯ ಮಾಪನದ ಅಧಿಸೂಚನೆಯನ್ನು ರದ್ದುಪಡಿಸಿ ಆದೇಶ ಮಾಡಿರುವುದು ಸರಿಯಿದೆ ಎಂದು ಹೇಳಿದ್ದಾರೆ.

ಹಿಂದಿನ ಬಿಜೆಪಿ ಸರಕಾರವು ಅನೇಕ ಪ್ರಗತಿಪರ ಶಿಕ್ಷಣ ಚಿಂತಕರ ಅಭಿಪ್ರಾಯಗಳನ್ನು ಬದಿಗೊತ್ತಿ ಶಾಲಾ ಮಕ್ಕಳ ಹಿತಾಸಕ್ತಿಗೆ ವಿರುದ್ಧವಾಗಿ ವಾರ್ಷಿಕ ಪರೀಕ್ಷೆಯನ್ನು ನಡೆಸಲು ತೀರ್ಮಾನವನ್ನು ತೆಗೆದುಕೊಂಡಿತ್ತು. ಕೆಲವು ಅಧಿಕಾರಿಗಳು ಇದಕ್ಕೆ ಪೂರಕವಾಗಿ ಈಗಿನ ಸರಕಾರಕ್ಕೆ ತಪ್ಪು ಮಾಹಿತಿಯನ್ನು ನೀಡಿ ರಾಜ್ಯ ಸರಕಾರವು ಅಧಿಸೂಚನೆಗಳನ್ನು ಹೊರಡಿಸಲು ಅನುವು ಮಾಡಿಕೊಟ್ಟಿದ್ದರು ಎಂದು ಅವರು ಆರೋಪಿಸಿದ್ದಾರೆ.

ಈ ಅಧಿಸೂಚನೆಗಳು ಶಿಕ್ಷಣ ಕಾಯಿದೆಯ ನಿಯಮಾವಳಿಗಳಿಗೆ ಪೂರಕವಾಗಿಲ್ಲ ಮತ್ತು ಯಾವುದೇ ತಿದ್ದುಪಡಿ ಶಾಸನದ ಮೂಲಕ ಇಂತಹ ಕ್ರಮಕ್ಕೆ ಅವಕಾಶ ನೀಡಿಲ್ಲ ಎನ್ನುವ ಕಾರಣಕ್ಕೆ ಹೈಕೋರ್ಟ್ ಶಿಕ್ಷಣ ಇಲಾಖೆಯ ಆದೇಶವನ್ನು ರದ್ದುಗೊಳಿಸಿದೆ. ಹಿಂದಿನ ಬಿಜೆಪಿ ಸರಕಾರವು ತನ್ನ ಹಿಡನ್ ಅಜೆಂಡಾಗೆ ಅನುಗುಣವಾಗಿ ವಾರ್ಷಿಕ ಪರೀಕ್ಷೆಯ ನಿರ್ಧಾರವನ್ನು ತೆಗೆದುಕೊಂಡಿತ್ತು ಎಂದು ರಮೇಶ್ ಬಾಬು ಟೀಕಿಸಿದ್ದಾರೆ.

ಶಿಕ್ಷಣ ಇಲಾಖೆಯ ಕೆಲವು ಅಧಿಕಾರಿಗಳು ತಮ್ಮ ವೈಯಕ್ತಿಕ ಹಿತಾಸಕ್ತಿಯ ಕಾರಣಕ್ಕಾಗಿ ಇಂತಹ ನಿರ್ಧಾರವು ಸರಿ ಎಂದು ಬಿಂಬಿಸಲು ಪ್ರಯತ್ನಿಸಿದ್ದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ರಾಜ್ಯದ ಅನೇಕ ಶಿಕ್ಷಣ ತಜ್ಞರು ಈ ಶಾಲೆಗಳಿಗೆ ಸಂಕಲನಾತ್ಮಕ ಮೌಲ್ಯಮಾಪನದ ಹೆಸರಿನಲ್ಲಿ ವಾರ್ಷಿಕ ಪರೀಕ್ಷೆ ಅಥವಾ ಪಬ್ಲಿಕ್ ಪರೀಕ್ಷೆ ನಡೆಸುವುದು ಸಮಂಜಸ ಅಲ್ಲವೆಂದು ಪ್ರತಿಪಾದಿಸಿದ್ದಾರೆ ಎಂದು ಅವರು ಗಮನ ಸೆಳೆದಿದ್ದಾರೆ.

ಈ ಕ್ರಮದಿಂದ ಮಕ್ಕಳ ಮನಸ್ಸುಗಳ ಮೇಲೆ ಒತ್ತಡವನ್ನು ಹೇರುವುದರ ಜೊತೆಗೆ ಕಲಿಕಾ ಕ್ರಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೈಕೋರ್ಟ್ ಈ ಎಲ್ಲ ಅಂಶಗಳನ್ನು ಪರಿಗಣಿಸಿ ಕರ್ನಾಟಕ ಶಿಕ್ಷಣ ಕಾಯಿದೆಗೆ ಪೂರಕವಾಗಿ ತನ್ನ ತೀರ್ಪನ್ನು ನೀಡಿದೆ. ಹೈಕೋರ್ಟ್ ತೀರ್ಪಿನ ವಿರುದ್ಧ ಯಾವುದೇ ಅಪೀಲು ಸಲ್ಲಿಸದೇ, ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ ಪರೀಕ್ಷೆಗಳನ್ನು ನಡೆಸಬೇಕೆಂದು ಅವರು ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News