ಮಹಿಳಾ ಅಧಿಕಾರಿಯ ಮೇಲೆ ಕಂದಾಯ ಮೌಲ್ಯಮಾಪಕನಿಂದ ದೌರ್ಜನ್ಯ: ಬಿಬಿಎಂಪಿಯಿಂದ ನೋಟಿಸ್ ಜಾರಿ

Update: 2024-01-23 15:44 GMT

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಾಯಕ ಕಂದಾಯ ಅಧಿಕಾರಿಯ ಕರ್ತವ್ಯಕ್ಕೆ ತೊಂದರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜನ್ಯ ಎಸಗಿದ ಕಂದಾಯ ಮೌಲ್ಯ ಮಾಪಕರ ವಿರುದ್ದ ಕಾರಣ ಕೇಳಿ ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಬಿಬಿಎಂಪಿ ಮಹಿಳಾ ಸಿಬ್ಬಂದಿಗಳು ಆಕ್ರೋಶ ವ್ಯಕ್ತಪಡಿಸಿ ಸೂಕ್ತ ರಕ್ಷಣೆ ಒದಗಿಸುವಂತೆ ಆಗ್ರಹಿಸಿದ್ದಾರೆ.

ಚಾಮರಾಜಪೇಟೆಯ 140 ವಾರ್ಡ್ ನ ಕಂದಾಯ ಮೌಲ್ಯಮಾಪಕ ಗಣೇಶ್ ಸಹಾಯಕ ಕಂದಾಯ ಅಧಿಕಾರಿ ಲಕ್ಷೀ.ಬಿ. ಅವರ ಕರ್ತವ್ಯ ನಿರ್ವಹಣೆಗೆ ತೊಂದರೆ ಮಾಡಿ ಕಚೇರಿಯಲ್ಲಿ ಸಾರ್ವಜನಿಕರು ಹಾಗೂ ಸಿಬ್ಬಂದಿಗಳ ಸಮ್ಮುಖದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅವರ ವಿರುದ್ದ ಸಹಾಯಕ ಕಂದಾಯ ಅಧಿಕಾರಿ ಲಕ್ಷ್ಮೀ.ಬಿ ನೀಡಿದ ದೂರಿನ ಹಿನ್ನಲೆಯಲ್ಲಿ ವಿಚಾರಣೆ ಮಾಡಿದ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತರು ಘಟನೆ ಬಗ್ಗೆ ಲಿಖಿತ ವಿವರ ನೀಡುವಂತೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಗಣೇಶ ಅವರು ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದು, ಅಲ್ಲದೆ ಕರ್ತವ್ಯ ಲೋಪವೆಸಗಿರುವುದು, ಸಹಾಯಕ ಕಂದಾಯ ಅಧಿಕಾರಿ ಹಾಗೂ ವಿಷಯ ನಿರ್ವಾಹಕರೊಂದಿಗೆ ದುರ್ನಡತೆಯಿಂದ ವರ್ತಿಸಿರುವುದು, ಕೆಸಿಎಸ್ ನಿಯಮಾವಳಿ 1966 ರ ಸರಕಾರಿ ನೌಕರರ ನಡತೆ ನಿಯಮಾವಳಿಗಳನ್ನು ಉಲ್ಲಂಘಿಸಿರುವುದುದರಿಂದ ಬಿಬಿಎಂಪಿ ಜಂಟಿ ಆಯುಕ್ತರು ಕಾರಣ ಕೇಳಿ ನೋಟಿಸ್ ಜಾರಿ ಮಾಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News