ಅತ್ಯಾಚಾರ-ಕೊಲೆ ಪ್ರಕರಣ : ಮೂವರ ಬಂಧನ

Update: 2024-05-24 16:30 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ಮಹಿಳೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 11 ವರ್ಷಗಳ ಬಳಿಕ ಪ್ರಕರಣವನ್ನು ಸಿಐಡಿ ಭೇದಿಸಿದ್ದು ಮೂವರನ್ನು ಬಂಧಿಸಿದೆ.

ನರಸಿಂಹ ಮೂರ್ತಿ, ದೀಪಕ್ ಮತ್ತು ಹರಿಪ್ರಸಾದ್ ಎಂಬುವರು ಬಂಧಿತ ಆರೋಪಿಗಳು ಎಂದು ಸಿಐಡಿ ತಿಳಿಸಿದೆ.

2013ರ ಫೆಬ್ರವರಿ 15ರಂದು ವಿಜಯಾ ಪೈ ಎಂಬುವವರನ್ನು ಕೊಲೆಗೈದಿದ್ದರು. ವಿಜಯಾ ಪೈ ಅವರನ್ನು ಅತ್ಯಾಚಾರವೆಸಗಿ ಬಳಿಕ ಕೊಲೆ ಮಾಡಿದ್ದರು. ಚಿಕ್ಕಜಾಲ ಬಳಿಯ ನೀಲಗಿರಿ ತೋಪಿನಲ್ಲಿ ಮೃತದೇಹ ಎಸೆದು ಪರಾರಿಯಾಗಿದ್ದರು ಎಂದು ವರದಿಯಾಗಿತ್ತು.

ನರಸಿಂಹಮೂರ್ತಿ ಮತ್ತು ಹರಿಪ್ರಸಾದ್ ಬ್ಯಾಂಕ್‍ನಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಅದೇ ಬ್ಯಾಂಕ್‍ನಲ್ಲಿ ವಿಜಯಾ ಪೈ ಪತಿ ಬಾಲಕೃಷ್ಣ ಪೈ ಕೂಡ ಕೆಲಸ ಮಾಡುತ್ತಿದ್ದರು. ಅನುಮಾನದ ಮೇಲೆ ವಿಜಯಾ ಪೈ ಪತಿಯನ್ನು ಪೊಲೀಸರು ಬಂಧಿಸಿದ್ದರು. ಕೆಲ ದಿನಗಳ ಬಳಿಕ ಕೊಲೆಯಲ್ಲಿ ಗಂಡನ ಪಾತ್ರವಿಲ್ಲ ಎಂಬುದು ಗೊತ್ತಾಗಿತ್ತು.

ಈ ಬಗ್ಗೆ ಚಿಕ್ಕಜಾಲ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ಸಿ ರಿಪೋರ್ಟ್ ಸಲ್ಲಿಸಿದ್ದರು. ವಿಜಯಾ ಪೈ ಪತಿ ಬಾಲಕೃಷ್ಣ ಪೈ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ವಿಸ್ತೃತ ತನಿಖೆ ಸಲುವಾಗಿ ಹೈಕೋರ್ಟ್ ಸಿಐಡಿಗೆ ಆದೇಶಿಸಿತ್ತು. ತನಿಖೆ ನಡೆಸಿದ್ದ ಸಿಐಡಿಗೆ ದೀಪಕ್ ಎಂಬಾತನ ಕೈವಾಡ ಬೆಳಕಿಗೆ ಬಂದಿತ್ತು.

ದೀಪಕ್ ಎಂಬುವನ ವಿಚಾರಣೆ ನಡೆಸಿದಾಗ ಬ್ಯಾಂಕ್ ವ್ಯವಸ್ಥಾಪಕ ನರಸಿಂಹಮೂರ್ತಿ, ಸಹಚರ ಹರಿಪ್ರಸಾದ್ ಕೈವಾಡ ಬೆಳಕಿಗೆ ಬಂದಿತ್ತು. ಇಬ್ಬರೂ ವಿಜಯಾ ಪೈರನ್ನು ಅತ್ಯಾಚಾರವೆಸಗಿ ಬಳಿಕ ಕೊಲೆಗೈದು ಚಿಕ್ಕಜಾಲ ಬಳಿಯ ನೀಲಗಿರಿ ತೋಪಿನಲ್ಲಿ ಮೃತದೇಹ ಎಸೆದು ಪರಾರಿಯಾಗಿದ್ದರು. ತಾಂತ್ರಿಕ, ವೈಜ್ಞಾನಿಕ ಸಾಕ್ಷ್ಯ ಸಂಗ್ರಹಿಸಿ ಮೂವರನ್ನು ಸಿಐಡಿ ಬಂಧಿಸಿದ್ದು, ಸದ್ಯ ಮೂವರ ವಿರುದ್ಧ ಸಿಐಡಿ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿರುವುದಾಗಿ ಪ್ರಕಟನೆಯಲ್ಲಿ ಮಾಹಿತಿ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News