ಸೀಟು ಬ್ಲಾಕಿಂಗ್ ಹಗರಣ : ಕೆಇಎ ಸಿಬ್ಬಂದಿ ಸೇರಿ 8 ಮಂದಿ ಬಂಧನ

Update: 2024-12-03 13:16 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ಇಂಜಿನಿಯರಿಂಗ್ ಸೀಟು ಬ್ಲಾಕಿಂಗ್ ಹಗರಣದಲ್ಲಿ ಭಾಗಿಯಾದ ಆರೋಪದಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಸಿಬ್ಬಂದಿ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಲಾಗಿದೆ.

2024-2025 ರ ವಿವಿಧ ಪದವಿಪೂರ್ವ ಇಂಜಿನಿಯರಿಂಗ್ ಕೋರ್ಸ್‍ಗಳ ಪ್ರವೇಶದ ಸಂದರ್ಭದಲ್ಲಿ ಶಂಕಿತ ಸೀಟು ಬ್ಲಾಕಿಂಗ್ ಹಗರಣದ ಬಗ್ಗೆ ದೂರು ದಾಖಲಿಸಿದಾಗ ಈ ಹಗರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಎಂಟು ಜನರನ್ನು ಬಂಧಿಸಲಾಗಿದೆ. ಈ ಪೈಕಿ ಒಬ್ಬರು ಕೆಇಎ ಸಿಬ್ಬಂದಿ, ಇತರರು ಮಧ್ಯವರ್ತಿಗಳು ಮತ್ತು ಕೆಲವು ಇಂಜಿನಿಯರಿಂಗ್ ಕಾಲೇಜುಗಳ ಸಿಬ್ಬಂದಿಗಳು ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳನ್ನು ಸೋಮವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನಂತರ ಅವರನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಕೆಇಎ ನೀಡಿದ ದೂರಿನ ಆಧಾರದ ಮೇಲೆ ವಂಚನೆಗಾಗಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಕ್ರಿಮಿನಲ್ ಮತ್ತು ಐಟಿ ಕಾಯ್ದೆಯ ಸೆಕ್ಷನ್‍ಗಳನ್ನು ಸಹ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

►ಏನಿದು ಪ್ರಕರಣ?:

ಸೀಟು ಹಂಚಿಕೆ ವಿಚಾರದಲ್ಲಿ ಖಾಸಗಿ ಕಾಲೇಜುಗಳ ಒಕ್ಕೂಟದೊಂದಿಗಿನ ಒಪ್ಪಂದದಂತೆ ನಿಗದಿಪಡಿಸಿದ ಕಾಲೇಜುಗಳಿಗೆ ಸೇರ್ಪಡೆಯಾಗದ 2,625 ಅಭ್ಯರ್ಥಿಗಳಿಗೆ ಸೂಕ್ತ ಕಾರಣ ನೀಡುವಂತೆ ಕೆಇಎ ನೋಟಿಸ್ ಜಾರಿ ಮಾಡಿತ್ತು. ಅಭ್ಯರ್ಥಿಗಳು ಕಾಲೇಜು ಪ್ರವೇಶ ಪಡೆಯದ್ದರಿಂದ ಮುಂದಿನ ಅರ್ಹ ಅಭ್ಯರ್ಥಿಗಳಿಗೆ ಉದ್ದೇಶಪೂರ್ವಕವಾಗಿ ವಂಚಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು.

ಅಲ್ಲದೇ ಸರಕಾರಿ ಸೀಟುಗಳ ಬದಲಿಗೆ ಮ್ಯಾನೇಜ್‍ಮೆಂಟ್ ಕೋಟಾದ ಸೀಟುಗಳಾಗಿ ಪರಿವರ್ತಿಸಿ, ಅಭ್ಯರ್ಥಿಗಳಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂಬ ಆಪಾದನೆ ಕೇಳಿಬಂದಿತ್ತು. ಸೀಟು ಅಗತ್ಯವಿಲ್ಲದ ಅಭ್ಯರ್ಥಿಗಳನ್ನು ಸಂಪರ್ಕಿಸಿ ಕೌನ್ಸೆಲಿಂಗ್‍ನಲ್ಲಿ ಭಾಗಿಯಾಗುವಂತೆ ಮಾಡಿಸಿ, ಉದ್ದೇಶಪೂರ್ವಕವಾಗಿ ಅರ್ಹ ಅಭ್ಯರ್ಥಿಗಳಿಗೆ ಸೀಟು ಸಿಗದಂತೆ ಆರೋಪಿಗಳು ಮಾಡುತ್ತಿದ್ದರು ಎಂದು ಪೊಲೀಸರ ವಿಚಾರಣೆಯಲ್ಲಿ ತಿಳಿದು ಬಂದಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News