ಅಧಿವೇಶನ | ಗಗನಯಾತ್ರಿ ಸುನೀತಾ ವಿಲಿಯಮ್ಸ್‌ಗೆ ವಿಧಾನಸಭೆಯಲ್ಲಿ ಅಭಿನಂದನೆ

PC: x.com/fpjindia
ಬೆಂಗಳೂರು : ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಬಾಹ್ಯಾಕಾಶದಿಂದ 9 ತಿಂಗಳ ಬಳಿಕ ಭೂಮಿಗೆ ವಾಪಸ್ ಆಗಿರುವುದಕ್ಕೆ ಸ್ಪೀಕರ್ ಯು.ಟಿ.ಖಾದರ್, ಬುಧವಾರ ವಿಧಾನಸಭೆಯಲ್ಲಿ ಸದನದ ವತಿಯಿಂದ ಅಭಿನಂದನೆ ಸಲ್ಲಿಸಿದರು.
ಗಗನಯಾತ್ರಿ ಸುನೀತಾ ವಿಲಿಯಮ್ಸ್ ತಮ್ಮ ವೃತ್ತಿ ಜೀವನದಲ್ಲಿ 9 ವಿವಿಧ ಬಾಹ್ಯಾಕಾಶ ನಡಿಗೆ ಒಳಗೊಂಡಂತೆ 62 ಗಂಟೆಗಳ ಕಾಲ ಬಾಹ್ಯಾಕಾಶ ನಡಿಗೆ ಮಾಡಿದ್ದಾರೆ. ಅನುಭವಿ ಗಗನಯಾತ್ರಿಯಾಗಿರುವ ಅವರು ಬಾಹ್ಯಾಕಾಶ ನಿಲ್ದಾಣ ಕಮಾಂಡರ್ ಆಗಿ ನೇಮಕಗೊಂಡು ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಸ್ಪೀಕರ್ ತಿಳಿಸಿದರು.
2024ರ ಜೂ.15ರಂದು ಸ್ಟಾರ್ ಲೈನರ್ ಬಾಹ್ಯಾಕಾಶ ನೌಕೆಯ ಮೂಲಕ ಅಂತರ್‍ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕೇವಲ ಒಂದು ವಾರದ ಅವಧಿಗೆ ತೆರಳಿದ ಸುನೀತಾ ವಿಲಿಯಮ್ಸ್ ಅವರು ಬಾಹ್ಯಾಕಾಶ ನೌಕೆಯಲ್ಲಿ ಉಂಟಾದ ದೋಷ ಹಾಗೂ ಅನೇಕ ತಾಂತ್ರಿಕ ಸಮಸ್ಯೆಗಳಿಂದಾಗಿ ಸುಮಾರು 9 ತಿಂಗಳು ಅಂತರ್‍ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಎದೇಗುಂದದೆ ತ್ರಿಶಂಕು ಪರಿಸ್ಥಿತಿಯನ್ನು ಎದುರಿಸುವಂತಾಗಿತ್ತು. ಅಂತಹ ವಿಷಮ ಸಂದರ್ಭದಲ್ಲೂ ಧೈರ್ಯವಾಗಿ ಪರಿಸ್ಥಿತಿಯನ್ನು ಅವರು ಎದುರಿಸಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಖಾದರ್ ಹೇಳಿದರು.
ಅಂತಿಮವಾಗಿ ಸ್ಪೇಸ್ ಎಕ್ಸ್ ಡ್ರ್ಯಾಗನ್ ನೌಕೆಯ ಮೂಲಕ ಸುನೀತಾ ವಿಲಿಯಮ್ಸ್ ಈ ದಿನ(ಮಾ.19) ಬೆಳಗ್ಗೆ 3.27ರ ಸುಮಾರಿಗೆ ಭೂಮಿಗೆ ಸುರಕ್ಷಿತವಾಗಿ ಹಿಂದಿರುಗಿದ್ದು ಸಂತಸದ ವಿಷಯವಾಗಿದೆ. ಅವರಿಗೆ ಈ ಸದನದ ಪರವಾಗಿ ಹೃತ್ಪೂರ್ವಕವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಸುನೀತಾ ವಿಲಿಯಮ್ಸ್ ಅವರೊಂದಿಗೆ ಗಗನಯಾತ್ರಿಗಳಾದ ಬುಚ್ ವಿಲ್ಮೋರ್, ಮಿಕ್ ಹೆಗ್, ಅಲೆಗ್ಸಾಂಡರ್ ಸುರಕ್ಷಿತವಾಗಿ ಭೂಮಿಗೆ ಹಿಂದಿರುಗಿರುವುದರಿಂದ ಅವರನ್ನು ಅಭಿನಂದಿಸುತ್ತೇನೆ ಎಂದು ಸ್ಪೀಕರ್ ತಿಳಿಸಿದರು.