ಲೈಂಗಿಕ ಹಗರಣ | ಎಚ್.ಡಿ.ರೇವಣ್ಣಗೂ ಲುಕ್‍ಔಟ್ ನೋಟಿಸ್ ಜಾರಿ : ಗೃಹ ಸಚಿವ ಜಿ.ಪರಮೇಶ್ವರ್

Update: 2024-05-04 13:56 GMT

ಬೆಂಗಳೂರು: ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರೂ ವಿದೇಶಕ್ಕೆ ಹೋಗುವ ಸಾಧ್ಯತೆ ಇರುವುದರಿಂದ ಲುಕ್‍ಔಟ್ ನೋಟಿಸ್ ಜಾರಿಗೊಳಿಸಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ.ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಇಬ್ಬರಿಗೂ ಅಂದೇ ಲುಕ್‍ಔಟ್ ನೋಟಿಸ್ ಕೊಟ್ಟಿದ್ದೇವೆ. ರೇವಣ್ಣ ಸಹ ಹೋರ ದೇಶಕ್ಕೆ ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಕ್ರಮ ಕೈಗೊಂಡಿದ್ದೇವೆ ಎಂದು ಮಾಹಿತಿ ನೀಡಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್.ಡಿ ರೇವಣ್ಣನಿಗೆ ಈಗಾಗಲೇ ಅಧಿಕಾರಿಗಳು ಎರಡು ನೋಟಿಸ್ ಕೊಟ್ಟಿದ್ದಾರೆ. ತನಿಖೆಗೆ ಹಾಜರಾಗಲು 24 ಗಂಟೆಗಳ ಸಮಯ ನೀಡಲಾಗಿದೆ. ಅವರು ವಿಚಾರಣೆಗೆ ಬರದಿದ್ದರೆ ನಂತರ ಏನು ಕ್ರಮ ಕೈಗೊಳ್ಳಬೇಕು ಎಂಬುದನ್ನು ನೋಡೋಣ. ಪ್ರಜ್ವಲ್ ರೇವಣ್ಣ ವಿಚಾರಣೆಗೆ ಬರಲೇಬೇಕು. ಇಂದಲ್ಲ, ನಾಳೆ ನಾಡಿದ್ದು ವಿಚಾರಣೆಗೆ ಬರಲೇಬೇಕು. ಅಗತ್ಯ ಬಿದ್ದರೆ ಬಂಧನವನ್ನೂ ಮಾಡುತ್ತೇವೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.

ಪೆನ್‍ಡ್ರೈವ್ ಪ್ರಕರಣದಲ್ಲಿ ರಾಜಕೀಯ ಮಾಡುತ್ತಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ, ರಾಜಕೀಯ ಯಾರು ಮಾಡುತ್ತಾರೆ?. ಮತದಾರರು ಎಲ್ಲವನ್ನೂ ಗಮನಿಸುತ್ತಾರೆ. ಮೇ 7ರ ನಂತರ ಏನು ಆಗುತ್ತೆ ಎಂಬುದನ್ನು ನಾವು ನೋಡೋಣ. ಅವರು ಕಾಯಲಿ ಎಂದರು.

ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ. ವಿಶೇಷ ತನಿಖಾ ತಂಡವು ಸಂತ್ರಸ್ತ ಮಹಿಳೆಯನ್ನು ರೇವಣ್ಣ ನಿವಾಸಕ್ಕೆ ಕರೆದೊಯ್ದು ಸ್ಥಳ ಮಹಜರು ಮಾಡಿದೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.

ಹುಬ್ಬಳ್ಳಿ ಪ್ರಕರಣ ಲವ್ ಜಿಹಾದ್ ಅಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿದ್ದು ತನಿಖೆ ನಡೆಯುತ್ತಿದೆ. ಈಗಲೇ ನಾವು ಏನನ್ನೂ ಹೇಳುವುದು ಬೇಡ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News