ಮಾತೃಭಾಷೆ ಸಿನೆಮಾ ಪ್ರಚಾರಗೊಳಿಸುವುದು ಸರಕಾರದ ಹೊಣೆ : ಶಾಲಿನಿ ರಜನೀಶ್
ಬೆಂಗಳೂರು: ಮಾತೃಭಾಷೆಯ ಸಿನೆಮಾಗಳನ್ನು ಹೆಚ್ಚು ಪ್ರಚಾರಗೊಳಿಸುವುದು, ನಮ್ಮ ಸರಕಾರದ ಹೊಣೆಗಾರಿಕೆಯಾಗಿದೆ. ಪಿ.ಶೇಷಾದ್ರಿ ನಿರ್ದೇಶನದಂತಹ ಸಿನೆಮಾಗಳನ್ನು ದಿನನಿತ್ಯ ಮಕ್ಕಳಿಗೆ ಮತ್ತು ಸಾಮಾನ್ಯ ಜನರಿಗೆ ಪ್ರಚಾರ ಮಾಡಿದರೆ ಸಾಕಷ್ಟು ಬದಲಾವಣೆಗಳು ಆಗುತ್ತವೆ ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ನಡೆದ ಪಿ.ಶೇಷಾದ್ರಿ ಸಿನಿಮಾವಲೋಕನ ಕಾರ್ಯಕ್ರಮದಲ್ಲಿ ಚಿತ್ರ-ಮಂಥನ, ಕಣ್ಣು ಕಂಡ ಕ್ಷಣಗಳು, ದಕ್ಕಿದ್ದು-ಮಿಕ್ಕಿದ್ದು ಮತ್ತು ಫ್ರೇಮ್ಸ್ ಆಫ್ ಕಾನ್ಸಿಯೆನ್ಸ್ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಇಂದು ಪ್ರದರ್ಶಿಸಿದ ಪಿ.ಶೇಷಾದ್ರಿ ಅವರ ಪ್ರತಿಯೊಂದು ಚಲನಚಿತ್ರಗಳು ಗಂಭೀರ ಸಮಸ್ಯೆಯನ್ನು ಸಹಜವಾಗಿ ನಮಗೆ ಮುಟ್ಟಿಸುತ್ತವೆ. ಅದಕ್ಕೆ ಹಲವು ಕಾನೂನು, ಅಧಿನಿಯಮಗಳು, ಯೋಜನೆಗಳನ್ನು ಮಾಡಿದರೂ ಕೂಡ ಸಾಧ್ಯವಿಲ್ಲ. ಪ್ರತಿಯೊಂದು ಶಾಲೆ ಮತ್ತು ಗ್ರಾಮ ಪಂಚಾಯತ್‍ಗಳಲ್ಲಿ ಪ್ರೊಜೆಕ್ಟರ್ ಸಿಸ್ಟಂ ಹಾಕಿದ್ದೇವೆ. ಇವು ಬೇರೆ ಬೇರೆ ಯೋಜನೆಗಳ ಮಾಹಿತಿಗಳ ಹಂಚಿಕೆಗಾಗಿ ಬಳಸಲಾಗುತ್ತಿದೆ. ಇಂಥ ಸಿನೆಮಾಗಳನ್ನು ದಿನನಿತ್ಯ ಮಕ್ಕಳಿಗೆ ಮತ್ತು ಸಾಮಾನ್ಯ ಜನರಿಗೆ ತೋರಿಸಿದರೆ ಸಾಕಷ್ಟು ಬದಲಾವಣೆಗಳು ಆಗುತ್ತವೆ ಎಂದು ತಿಳಿಸಿದರು.
ಪ್ರತಿಯೊಂದು ಮನಸ್ಸಿನಲ್ಲಿ ಬದಲಾವಣೆಗಳನ್ನು ತರೋಣ, ನಮ್ಮ ನಾಡು ಯಾವಾಗಲೂ ಮುಂಚೂಣಿಯಲ್ಲಿ ಇರುತ್ತದೆ. ಇನ್ನಷ್ಟು ಮುಂದುವರಿಯಬೇಕು. ಮುಂದಿನ ದಿನಗಳಲ್ಲಿ ಕನ್ನಡ ಸಿನೆಮಾಗಳನ್ನು ಜನಪ್ರಿಯಗೊಳಿಸಲು ಅವುಗಳ, ಪ್ರಚಾರಗೊಳಿಸುವ ನಿಟ್ಟಿನಲ್ಲಿ ವೇದಿಕೆಯನ್ನು ನೀಡುವ ಕುರಿತು ಕೆಲವು ವಿಷಯಗಳ ಪ್ರಸ್ತಾಪವಾಗಿದೆ ಎಂದು ತಿಳಿಸಿದರು.
ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಮಾತನಾಡಿ, ಚಿತ್ರ ಮಂಥನ ಕೃತಿ ಯಾಕೆ ಮುಖ್ಯವಾಗುತ್ತದೆ ಎಂದರೆ, ವ್ಯಕ್ತಿಯನ್ನು ವಿಜೃಂಭಿಸಬಾರದು, ಸಿನೆಮಾವನ್ನು ವಿಜೃಂಭಿಸಬೇಕು ಎಂದು ಶೇಷಾದ್ರಿ ಅವರು ಹೇಳಿದ್ದರು. ಕನ್ನಡದಲ್ಲಿ ಸಿನೆಮಾ ಬಗ್ಗೆ ಅನೇಕ ಪುಸ್ತಕಗಳು ಬಂದಿವೆ. ಅವುಗಳಲ್ಲಿ ಹೆಚ್ಚು ವ್ಯಕ್ತಿಯನ್ನು ವಿಜೃಂಭಿಸುವ ಪುಸ್ತಕಗಳಾಗಿವೆ. ಚಿತ್ರ ಸಂಸ್ಕೃತಿ ಬೆಳೆಯಬೇಕಾದರೆ, ಸಿನೆಮಾದ ಬಗ್ಗೆ ಪಠ್ಯ ಕನ್ನಡದಲ್ಲಿ ಹೆಚ್ಚು ಇಲ್ಲ. ಅದಕ್ಕೆ ಪೂರಕವಾಗುವ ಪುಸ್ತಕಗಳನ್ನು ತರಬೇಕು ಎಂಬ ಶೇಷಾದ್ರಿ ಅವರ ಕಾಳಜಿಯನ್ನು ಹಿಂದಿನಿಂದಲು ನೋಡಿದ್ದೇವೆ ಎಂದು ತಿಳಿಸಿದರು.
ಚಿತ್ರ ಮಂಥನ ಪುಸ್ತಕ ಪಿ.ಶೇಷಾದ್ರಿ ಅವರ 12 ಸಿನೆಮಾಗಳನ್ನು ಕುರಿತು 26 ಲೇಖಕರು ಲೇಖನಗಳ ಸಂಕಲನ. ಈ ಲೇಖನಗಳಲ್ಲಿ ಸಿನೆಮಾವನ್ನು ತಾತ್ವಿಕ ನೆಲೆಯನ್ನು ಗ್ರಹಿಸುವ ಕ್ರಮ, ಶೇಷಾದ್ರಿ ಅವರ ಒಟ್ಟು ಸಿನೆಮಾ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬಹುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ನಿರ್ದೇಶಕ ಟಿ.ಎಸ್.ನಾಗಾಭರಣ, ನಟ ಸುಚೇಂದ್ರ ಪ್ರಸಾದ್, ಗೋಪಾಲಕೃಷ್ಣ ಪೈ ಮತ್ತಿತತರರು ಉಪಸ್ಥಿತರಿದ್ದರು.