‘ಶಿವಶ್ರೀ ಪ್ರಶಸ್ತಿ ಪ್ರದಾನ’-‘ಸಂಜೆಗೊಂದು ನುಡಿಚಿಂತನ -365’ ಕೃತಿ ಲೋಕಾರ್ಪಣೆ

ಬೆಂಗಳೂರು: ರಾಯಚೂರಿನ ಶಿವರಾಜ್ ವಿ. ಪಾಟೀಲ್ ಎಂದರೆ ತಂದೆ ವ್ಯಕ್ತಿತ್ವದ ಸುಪ್ರಿಂ ಕೋರ್ಟಿನ ನ್ಯಾಯಮೂರ್ತಿ ಎಂದೇ ಹೇಳಬಹುದು. ಸಹಾಯ ಮಾಡುವ ಗುಣದಿಂದಲೇ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಣ್ಣಿಸಿದ್ದಾರೆ.
ರವಿವಾರ ಆರ್‍ಟಿನಗರದ ತರಳಬಾಳು ಕೇಂದ್ರ ಸಭಾಂಗಣದಲ್ಲಿ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಪ್ರತಿಷ್ಠಾನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಶಿವಶ್ರೀ ಪ್ರಶಸ್ತಿ ಪ್ರದಾನ’ ಮತ್ತು ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಅವರ ‘ಸಂಜೆಗೊಂದು ನುಡಿಚಿಂತನ -365’ ಕೃತಿ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿವರಾಜ ಪಾಟೀಲ್ ಅವರು ಬಡವರಿಗೆ ಬಹಳಷ್ಟು ರೀತಿಯಲ್ಲಿ ಸಹಾಯವನ್ನು ಮಾಡಿದ್ದಾರೆ. ಅವರು ಮಾಡಿದಂತಹ ಸಮಾಜ ಕಾರ್ಯದಿಂದಲೇ ಇಂದು ಅವರು ಋಣಾತ್ಮಕವಾಗಿ ಮಾತನಾಡದಂತಹ ಜನರನ್ನು ಗಳಿಸಿದ್ದಾರೆ. ಹೀಗೆ ತಮ್ಮ ಜೀವನದುದ್ದಕ್ಕೂ ಜನಮೆಚ್ಚುಗೆಯನ್ನು ಗಳಿಸಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ನಿ.ನ್ಯಾಯಮೂರ್ತಿ ಶಿವರಾಜ ವಿ.ಪಾಟೀಲ ಪ್ರತಿಷ್ಠಾನವೂ ರಾಜ್ಯದ ಎಲ್ಲೆಡೆ ಬಡ ಸಮುದಾಯಗಳ ಏಳಿಗೆಗೆ ಕಾರ್ಯ ನಿರ್ವಹಿಸುತ್ತಿದೆ. ಜತೆಗೆ, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಕಾರ್ಯವೂ ಪ್ರಧಾನವಾಗಿ ಇಟ್ಟುಕೊಂಡಿರುವುದು ಸಂತಸ ತಂದಿದೆ ಎಂದು ನುಡಿದರು.
ಕರ್ನಾಟಕ ಗಡಿ ಹಾಗೂ ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ, ಸುಪ್ರೀಂ ಕೋರ್ಟಿನ ನಿವೃತ್ತ ಶಿವರಾಜ್ ವಿ. ಪಾಟೀಲ್ ಮಾತನಾಡಿ, ಪ್ರಸ್ತುತ ಸಾಲಿನ ‘ಶಿವಶ್ರೀ ಪ್ರಶಸ್ತಿ’ಯನ್ನು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಅಧ್ಯಕ್ಷ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರಿಗೆ ಪ್ರದಾನಿಸಿರುವುದು ಸಂತಸ ಮಾತ್ರವಲ್ಲದೆ, ಈ ಪ್ರಶಸ್ತಿಗೆ ಗೌರವ ಬಂದಿದೆ ಎಂದೇ ಹೇಳಬಹುದು. ಅವರು ಮುಂದಿನ ದಿನಗಳಲ್ಲಿ ಸಮಾಜಕ್ಕೆ ಶಾಮನೂರು ಶಿವಶಂಕರಪ್ಪ ಮತ್ತಷ್ಟು ಕೊಡುಗೆ ನೀಡಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ನಿ.ನ್ಯಾಯಮೂರ್ತಿ ಶಿವರಾಜ ವಿ.ಪಾಟೀಲ ಪ್ರತಿಷ್ಠಾನ ಅಧ್ಯಕ್ಷ ಎಸ್.ಎಂ.ರೆಡ್ಡಿ, ಕಾರ್ಯದರ್ಶಿ ಚನ್ನಾರೆಡ್ಡಿ ಎಂ ಪಾಟೀಲ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಈ ಪುಣ್ಯಾತ್ಮ ಮತ್ತಷ್ಟು ಕಾಲ ಬದುಕಲಿ:
‘ಶಾಮನೂರು ಶಿವಶಂಕರಪ್ಪ ನನಗೆ ಆಪ್ತ ಸ್ನೇಹಿತರಾಗಿದ್ದು, ನನಗಿಂತ 11 ವರ್ಷ ಹಿರಿಯರು. ಶಿಕ್ಷಣ, ವ್ಯಾಪಾರ, ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಶಾಮನೂರು ಶಿವಶಂಕರಪ್ಪ ತಮ್ಮ ಹೆಜ್ಜೆಗುರುತು ಇಟ್ಟಿದ್ದಾರೆ. ಈಗಿನ ಕಾಲದಲ್ಲಿ ತಮ್ಮವರಿಗೆ ಸಹಾಯ ಮಾಡದಿದ್ದರೆ, ಬೇರೆಯವರ ಕಾಲೆಳೆಯುವವರೇ ಜಾಸ್ತಿ. ಆದರೆ, ನಮ್ಮ ಕಾಲದಲ್ಲಿ ಇಂತಹ ಮನಸ್ಥಿತಿ ಇರಲಿಲ್ಲ. ಇದಕ್ಕೆ ಶಾಮನೂರು ಶಿವಶಂಕರಪ್ಪ ಅವರೇ ಪ್ರಮುಖ ಉದಾಹರಣೆ ಆಗಿದ್ದು, ಈ ಪುಣಾತ್ಮ ಮತ್ತಷ್ಟು ಕಾಲ ಬದುಕಲಿ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನುಡಿದರು.
