ಪರವಾನಗಿ ಭೂಮಾಪಕರ ಖಾಯಂ ಮಾಡಲು ಕ್ರಮ, 36 ಎಡಿಎಲ್‌ಆರ್‌ಗಳ ನೇಮಕ : ಸಿದ್ದರಾಮಯ್ಯ

Update: 2025-04-10 14:10 IST
ಪರವಾನಗಿ ಭೂಮಾಪಕರ ಖಾಯಂ ಮಾಡಲು  ಕ್ರಮ, 36 ಎಡಿಎಲ್‌ಆರ್‌ಗಳ ನೇಮಕ :  ಸಿದ್ದರಾಮಯ್ಯ
  • whatsapp icon

ಬೆಂಗಳೂರು: ಕಂದಾಯ ಇಲಾಖೆ ಸರ್ಕಾರಕ್ಕೆ ಮಾತೃ ಇಲಾಖೆ ಇದ್ದಂತೆ. ಪೋಡಿಮುಕ್ತ ಗ್ರಾಮಗಳಾಗಬೇಕು. ಸರ್ವೇ ಕಾರ್ಯ ಪೂರ್ಣಗೊಳ್ಳಬೇಕು. ಪರವಾನಗಿ ಭೂಮಾಪಕರ ಖಾಯಂ ಮಾಡಲು ಗಂಭೀರ ಕ್ರಮದ ಜೊತೆಗೆ 36 ಎಡಿಎಲ್‌ಆರ್‌ ಗಳ ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಘೋಷಣೆ ಮಾಡಿದರು.

ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ನಡೆದ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಹಾಗೂ ಇಲಾಖೆಯ ನೌಕರರ ಸಂಘಗಳ 36ನೇ ರಾಷ್ಟ್ರೀಯ ಭೂಮಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಂದಾಯ ಇಲಾಖೆ ಸರಕಾರದ ಮಾತೃ ಇಲಾಖೆ ರೀತಿ ಇದೆ. ಈ ಇಲಾಖೆ ಅಚ್ಚುಕಟ್ಟಾಗಿ ಕೆಲಸ ಮಾಡಿದರೆ ರೈತ ಸಮುದಾಯ ನೆಮ್ಮದಿಯಾಗಿರುತ್ತದೆ. ಕೃಷ್ಣಬೈರೇಗೌಡರ ನೇತೃತ್ವದಲ್ಲಿ ಕಂದಾಯ ಇಲಾಖೆಯಲ್ಲಿ ಅತ್ಯುತ್ತಮ ಕೆಲಸಗಳಾಗುತ್ತಿವೆ ಎಂದು ಮೆಚ್ಚುಗೆ ಸೂಚಿಸಿದರು.

ಕೃಷ್ಣಬೈರೇಗೌಡರು ಇಲಾಖೆಯನ್ನು ಚೆನ್ನಾಗಿ ಅರ್ಥಮಾಡಿಕೊಂಡು, ನಾಲಗೆ ತುದಿಯಲ್ಲಿ ಅಂಕಿ ಅಂಶ ಇಟ್ಟುಕೊಂಡಿರುವ ಸಮರ್ಥ ಮಂತ್ರಿ. ಕೇವಲ ಮಂತ್ರಿ ಆದರೆ ಸಾಲದು. ಪರಿಣತಿ, ಕಾಳಜಿ ಇರಬೇಕು. ಇವೆರಡೂ ಕೃಷ್ಣಬೈರೇಗೌಡ ಅವರಲ್ಲಿದೆ ಎಂದು ಸಿಎಂ ಮೆಚ್ಚುಗೆ ಸೂಚಿಸಿದರು.

ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿ ಕಂದಾಯ ಇಲಾಖೆಯ, ನೌಕರರ ಬಹಳಷ್ಟು ಸಮಸ್ಯೆಗಳನ್ನು ಬಗೆಹರಿಸಿದ್ದೇನೆ. ಪೂರ್ತಿ ಸಮಸ್ಯೆ ಬಗೆಹರಿದಿಲ್ಲ ಎನ್ನುವ ಬೇಸರ ನನಗೂ ಇದೆ. ತಹಶೀಲ್ದಾರ್, ಎಸಿ ಕಚೇರಿಗಳಲ್ಲಿ ಸುಗಮವಾಗಿ, ಪ್ರಾಮಾಣಿಕವಾಗಿ ಕೆಲಸಗಳು ಆದರೆ ನಾಡಿನ ಜನತೆ, ರೈತ ಸಮುದಾಯ ಅತ್ಯಂತ ನೆಮ್ಮದಿಯಾಗಿರುತ್ತದೆ ಎಂದರು.

ಕಂದಾಯ ಇಲಾಖೆಗೆ ಅಗತ್ಯ ಇರುವಷ್ಟು ಹಣ ಕೊಟ್ಟಿದ್ದೇವೆ, ಮುಂದೆಯೂ ಕೊಡುತ್ತೇವೆ. ಅಗತ್ಯ ಸಿಬ್ಬಂದಿ ಬಲವನ್ನೂ ಕೊಟ್ಟಿದ್ದೇವೆ. ಅಗತ್ಯ ಇದ್ದರೆ ಮತ್ತೂ ಕೊಡುತ್ತೇನೆ. ಖಾಲಿ ಇರುವ ಎಲ್ಲಾ ಸರ್ವೇಯರ್ ಹುದ್ದೆಗಳ ನೇಮಕಾತಿ ಅತ್ಯಂತ ಪಾರದರ್ಶಕವಾಗಿ ಆಗಿದೆ. ಸದ್ಯದಲ್ಲೇ ನೇಮಕಾತಿ ಪತ್ರವನ್ನೂ ಕೊಡುತ್ತೇವೆ ಎಂದರು. ಹಿಂದೆ ಗೋವಿಂದೇಗೌಡರು ಪ್ರಾಮಾಣಿಕವಾಗಿ ಒಂದು ಲಕ್ಷ ಶಿಕ್ಷಕರ ನೇಮಕಾತಿ ಆಗಿರುವ ರೀತಿಯಲ್ಲೇ ಕೃಷ್ಣಬೈರೇಗೌಡರು ಸರ್ವೇಯರ್ ಗಳ ನೇಮಕಾತಿ ಮಾಡಿದ್ದಾರೆ. ಪರವಾನಗಿ ಭೂಮಾಪಕರ ಕಾಯಂ ಮಾಡಲು ಗಂಭೀರ ಚಿಂತನೆ ಮಾಡಲಾಗುವುದು. ಜೊತೆಗೆ 36 ಮಂದಿ ಎಡಿಎಲ್ ಆರ್ ಗಳ ನೇಮಕವನ್ನೂ ಸದ್ಯದಲ್ಲೇ ಮಾಡಲಾಗುವುದು ಎಂದು ಘೋಷಿಸಿದರು.

ನಮ್ಮದು ಹಳ್ಳಿಗಳ ಮತ್ತು ರೈತರ ದೇಶ. ಗ್ರಾಮಗಳು ಮತ್ತು ರೈತರು ನೆಮ್ಮದಿಯಾಗಿ ಉತ್ಪಾದನೆಯಲ್ಲಿ ತೊಡಗಬೇಕಾದರೆ ಸರ್ವೇ ಕಾರ್ಯ ಸರಿಯಾಗಿ ಪೂರ್ಣಗೊಳ್ಳಬೇಕು. ಕೆರೆ ಕಟ್ಟೆಗಳ ಒತ್ತುವರಿ ತೆರವುಗೊಳಿಸಬೇಕು, ಪೋಡಿ ಮುಕ್ತ ಗ್ರಾಮಗಳಾಗಬೇಕು. ಇದಕ್ಕಾಗಿ ಇಲಾಖೆಯ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಶ್ರಮಿಸಿ, ಧ್ವನಿ ಇಲ್ಲದವರ ಪರವಾಗಿ ಕೆಲಸ ಮಾಡುವುದೇ ನಿಜವಾದ ಪುಣ್ಯದ ಕಾರ್ಯ ಎಂದು ಕರೆ ನೀಡಿದರು.

ಪ್ರತೀ ವರ್ಷ ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಪ್ರತೀ ವರ್ಷ ಆಚರಿಸಬೇಕು ಎಂದು ಸೂಚಿಸಿದರು.

ಶಾಸಕ ರಿಜ್ವಾನ್ ಅರ್ಷದ್ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಚಿವರಾದ ಕೃಷ್ಣಬೈರೇಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್‌, ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News