ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿಯಿಂದ ಉಮೇದುವಾರಿಕೆ ಸಲ್ಲಿಕೆ

Update: 2024-04-01 16:49 GMT

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸೌಮ್ಯಾರೆಡ್ಡಿ ಉಮೇದುವಾರಿಕೆ ಸಲ್ಲಿಸಿದ್ದು, ನಮ್ಮ ಮನೆ ಮಗಳಾಗಿರುವ ಅವರನ್ನು 1 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸೋಮವಾರ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರು ಬಿಬಿಎಂಪಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು. ಇದಕ್ಕೂ ಮುನ್ನ ಜಯನಗರದಲ್ಲಿ ನಡೆದ ಬೃಹತ್ ಮೆರವಣಿಗೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಮಲಿಂಗಾರೆಡ್ಡಿ, ಸೇರಿದಂತೆ ಅಪಾರ ಬೆಂಬಲಿಗರು ಪಾಲ್ಗೊಂಡಿದ್ದರು.

ಮೆರವಣಿಗೆಯನ್ನುದ್ದೇಶಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್, ಸೌಮ್ಯ ರೆಡ್ಡಿ ನಮ್ಮ ಮನೆ ಮಗಳು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕನಿಷ್ಠ 1 ಲಕ್ಷ ಮತಗಳ ಅಂತರದಲ್ಲಿ ಅವರನ್ನು ಗೆಲ್ಲಿಸಿ. ನನ್ನ ಪುತ್ರಿ ಐಶ್ವರ್ಯಾ ಬೇರೆಯಲ್ಲ, ಸೌಮ್ಯಾ ರೆಡ್ಡಿ ಬೇರೆಯಲ್ಲ. ಅತ್ಯಂತ ಕ್ರಿಯಾಶೀಲ ಹೆಣ್ಣುಮಗಳು. ಬೊಮ್ಮನಹಳ್ಳಿ, ಬಸವನಗುಡಿ ಸೇರಿದಂತೆ ಈ ಕ್ಷೇತ್ರದ ಎಲ್ಲ ಕಡೆಯೂ ಹೆಚ್ಚು ಮತಗಳು ಸೌಮ್ಯಾ ಅವರಿಗೆ ಬರುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇಡೀ ರಾಜ್ಯದಲ್ಲಿ ಯಾವ ಪ್ರಧಾನಿ ಮೋದಿ ಅಲೆಯೂ ಇಲ್ಲ, ಬಿಜೆಪಿ ಅಲೆಯೂ ಇಲ್ಲ. ಇರುವುದು ಒಂದೇ ಗಾಳಿ, ಅದು ಕಾಂಗ್ರೆಸ್, ಗ್ಯಾರಂಟಿ ಗಾಳಿ. ನಾನು ಮತ್ತು ಸಿದ್ದರಾಮಯ್ಯ ಅವರು ಗ್ಯಾರಂಟಿ ಚೆಕ್ಕಿಗೆ ಸಹಿ ಹಾಕಿ, ಅನುಷ್ಠಾನಕ್ಕೆ ತಂದಿದ್ದೇವೆ. ಕಾಂಗ್ರೆಸ್ ಜನರ ಸಹಕಾರದಿಂದ 136 ಸ್ಥಾನಗಳನ್ನು ಗೆದ್ದು, ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ದೇಶದ ಯಾವ ರಾಜ್ಯಗಳು ಮಾಡದ ಕೆಲಸವನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಮಾಡಿದೆ ಎಂದು ಹೇಳಿದರು.

ಕಾಂಗ್ರೆಸ್ ಜನರ ಭಾವನೆ ಮೇಲೆ ರಾಜಕಾರಣ ಮಾಡುವುದಿಲ್ಲ, ಜನರ ಬದುಕಿನ ಮೇಲೆ ರಾಜಕಾರಣ ಮಾಡುತ್ತದೆ. ಜನರ ಕಲ್ಯಾಣಕ್ಕೆ ಎಂದು 52 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ನೀಡಿದ್ದೇವೆ. ಆದರೆ ಕೇಂದ್ರ ಸರಕಾರ ಕರ್ನಾಟಕದ ಪಾಲಿನ ಹಣ ಕೊಡಲಿಲ್ಲ. ಇದರಿಂದ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ ಎಂದು ಟೀಕಿಸಿದರು.

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಂಟ, ರೆಡ್ಡಿ, ಸೇರಿ ಒಟ್ಟು ಎಂಟು ಮಂದಿ ಒಕ್ಕಲಿಗರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ. ಒಕ್ಕಲಿಗರನ್ನು ಸಿಎಂ ಮಾಡಲಿಲ್ಲವಲ್ಲ ಎನ್ನುವ ಟೀಕೆಗೆ ನಾವು ಈ ರೀತಿ ಉತ್ತರಿಸಿದ್ದೇವೆ. ಇದರ ಜತೆಗೆ ಆರು ಮಹಿಳೆಯರಿಗೆ ಟಿಕೆಟ್ ನೀಡಿದ್ದೇವೆ ಎಂದ ಅವರು, ಸೌಮ್ಯ ರೆಡ್ಡಿ ಸೋತಿಲ್ಲ, ಅಧಿಕಾರಿಗಳಿಂದ ಅವರು ಸೋಲಬೇಕಾಯಿತು. ಒತ್ತಡಕ್ಕೆ ಒಳಗಾಗಿ ನಾವು ಸೌಮ್ಯರೆಡ್ಡಿ ಅವರನ್ನು ಸೋಲಿಸಬೇಕಾಯಿತು ಎಂದು ಅಕ್ರಮದಲ್ಲಿ ಭಾಗಿಯಾಗಿದ್ದ ಅಧಿಕಾರಿಗಳು ರಾಮಲಿಂಗಾರೆಡ್ಡಿ ಅವರ ಬಳಿ ಬಂದು ಕ್ಷಮಾಪಣೆ ಕೇಳಿದರು ಎನ್ನುವ ಸಂಗತಿ ತಿಳಿಯಿತು ಎಂದು ಅವರು ಉಲ್ಲೇಖಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News