ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಅಕ್ರಮ ದಂಧೆ ತಡೆಯಲು ವಿಶೇಷ ಪೊಲೀಸ್ ಆಯುಕ್ತಾಲಯ ಸ್ಥಾಪಿಸಿ: ಕೆಪಿಸಿಸಿ ವಕ್ತಾರ ರಮೇಶ್ ಬಾಬು
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾದಕ ದ್ರವ್ಯ ವಸ್ತುಗಳ ಅಕ್ರಮ ದಂಧೆಯನ್ನು ತಡೆಯಲು ವಿಶೇಷ ಪೊಲೀಸ್ ಆಯುಕ್ತಾಲಯವನ್ನು ಸ್ಥಾಪಿಸುವಂತೆ ಕೆಪಿಸಿಸಿ ವಕ್ತಾರ ರಮೇಶ್ ಬಾಬು ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು," ಮಾದಕ ವಸ್ತುಗಳ ಮಾರಾಟ ಇಡೀ ದೇಶದಲ್ಲಿ ವ್ಯಾಪಕವಾಗಿದ್ದು, ಸಾಮಾಜಿಕ ಪಿಡುಗು ಆಗುವುದರ ಜೊತೆಗೆ ಯುವ ಜನಾಂಗಕ್ಕೆ ಮಾರಕವಾಗಿ ವ್ಯಾಪಿಸಿರುತ್ತದೆ. ಮಾದಕ ವಸ್ತುಗಳ ಅಕ್ರಮ ದಂದೆಯು ದಿನೇ ದಿನೇ ಹೆಚ್ಚಾಗುತ್ತಿದ್ದು, ಬೆಂಗಳೂರು ಮಹಾನಗರದಲ್ಲಿ ಪೆಢರ್‌ಗಳ ಸಂಖ್ಯೆ ಹೆಚ್ಚಾಗುವುದರ ಜೊತೆಗೆ ಬಹುತೇಕ ಯುವಕರು ಮತ್ತು ವಿದ್ಯಾರ್ಥಿಗಳು ಇದಕ್ಕೆ ಬಲಿಯಾಗುತ್ತಿದ್ದಾರೆ. ರಾಜ್ಯ ಸರ್ಕಾರವು ಈ ಅಕ್ರಮ ದಂದೆಯನ್ನು ಹತ್ತಿಕ್ಕುವುದರ ಜೊತೆಗೆ ಯುವ ಜನಾಂಗದ ಭವಿಷ್ಯವನ್ನು ಸಂರಕ್ಷಣೆ ಮಾಡಬೇಕಾಗಿರುತ್ತದೆ" ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರವು ರಾಜ್ಯ ಸಭೆಯಲ್ಲಿ 14-12-2022 ರಂದು ನೀಡಿರುವ ಲಿಖಿತ ಮಾಹಿತಿಯ ಪ್ರಕಾರ ಕರ್ನಾಟಕದಲ್ಲಿ ಪ್ರತಿ ವರ್ಷ ಮಾದಕ ವಸ್ತುಗಳ ದಂಧೆ ಹೆಚ್ಚಾಗುತ್ತಿದ್ದು, ಇದರಿಂದ ಅಪರಾಧ ಪ್ರಕರಣಗಳು ಹೆಚ್ಚಾಗಿ ಯುವಜನರು ಇದಕ್ಕೆ ಬಲಿಯಾಗುತ್ತಿದ್ದಾರೆ. ವಿಶೇಷವಾಗಿ ಬೆಂಗಳೂರು ಮಹಾನಗರದಲ್ಲಿ ಈ ಅಕ್ರಮ ದಂಧೆ ಮಿತಿಮೀರಿ ನಡೆಯುತ್ತಿದೆ ಎಂದು ಗಮನ ಸೆಳೆದರು.
"ಕರ್ನಾಟಕ ರಾಜ್ಯ ಸರ್ಕಾರವು ಬೆಂಗಳೂರು ಮಹಾನಗರದ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಆಕ್ರಮ ದಂಧೆಯ ನಿಗ್ರಹ ಮಾಡಲು ಪೊಲೀಸ್ ವಿಶೇಷ ಆಯುಕ್ತಾಲಯವನ್ನು ಸ್ಥಾಪಿಸುವುದು ಇಂದಿನ ಅನಿವಾರ್ಯತೆ ಆಗಿರುತ್ತದೆ. ಬೃಹತ್ ಬೆಂಗಲೂರು ಮಹಾನಗರ ವ್ಯಾಪ್ತಿಯಲ್ಲಿ ಬರುವ ಪ್ರತೀ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತುಗಳ ಅಕ್ರಮ ದಂಧೆಯ ನಿರ್ವಹಣೆಗೆ ಪೊಲೀಸ್ ಇನ್ಸ್‌ಪೆಕ್ಟರ್ ಹಂತದ ಒಬ್ಬ ಅಧಿಕಾರಿಯನ್ನು ಪ್ರತ್ಯೇಕವಾಗಿ ನೇಮಕ ಮಾಡಿ ಈ ಅಕ್ರಮ ದಂಧೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಆದ್ಯತೆಯ ಮೇರೆಗೆ ಕ್ರಮ ಕೈಗೊಳ್ಳಬೇಕು "ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ನೀಡಿರುವ ಮಾಹಿತಿಯಲ್ಲಿ ಮಾದಕ ವಸ್ತುಗಳ ಅಕ್ರಮ ಮಾರಾಟದಲ್ಲಿ ರಾಜ್ಯ 11 ನೇ ಸ್ಥಾನದಲ್ಲಿ ಇದ್ದರೂ, ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ದಾಖಲೆಯ ರೂಪದಲ್ಲಿ ಹೆಚ್ಚುತ್ತಿರುವ ನಿಷೇದಿತ ವಿವಿಧ ರೀತಿಯ ಮಾದಕ ವಸ್ತುಗಳ ಜಪ್ತಿ ಅಪರಾಧ ಪ್ರಕರಣಗಳ ದಾಖಲೆ, ಪೆಡ್ಲರ್‌ಗಳ ಬಂಧನ ಆತಂಕವನ್ನು ಉಂಟು ಮಾಡಿರುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ವಿದೇಶಿಗರ ಬಂಧನದ ಜೊತೆಗೆ ನಾರ್ಕೋಲ್ಯಾಬ್ ವಶಪಡಿಸಿಕೊಳ್ಳಲಾಗಿದೆ. ಇದು ಮಾದಕ ವಸ್ತುಗಳ ಆಕ್ರಮ ದಂಧೆಯ ಗಂಭೀರತೆಯನ್ನು ಅನಾವರಣಗೊಳಿಸಿರುತ್ತದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿನ ಗಲ್ಲಿಗಳ ಜೊತೆಗೆ ಶಾಲಾ ಕಾಲೇಜುಗಳ ಜೊತೆಗೆ ಮಾದಕ ವಸ್ತುಗಳ ಬಳಕೆ ವ್ಯಾಪಿಸಿದ್ದು, ಇದನ್ನು ತಡೆಯದೇ ಹೋದರೆ ರಾಜ್ಯಕ್ಕೆ ಯುವಜನಾಂಗಕ್ಕೆ ಗಂಡಾಂತರವಾಗಲಿದೆ. ಆದುದರಿಂದ ತಾವು ದಯಮಾಡಿ ಈ ಅಕ್ರಮ ದಂದೆಯನ್ನು ಗಂಭೀರವಾಗಿ ಪರಿಗಣಿಸಿ ಇದರ ನಿಗ್ರಹಕ್ಕೆ ಬೆಂಗಳೂರಿನಲ್ಲಿ ಪೊಲೀಸ್ ವಿಶೇಷ ಆಯುಕ್ತಾಲಯವನ್ನು ಮತ್ತು ಆವಶ್ಯಕ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.