ಬಜೆಟ್ ಕರ್ನಾಟಕವನ್ನು ಆರ್ಥಿಕ ದುಸ್ಥಿತಿಗೆ ದೂಡಲಿದೆ : ಸುನೀಲ್ ಕುಮಾರ್

Update: 2025-03-07 19:13 IST
ಬಜೆಟ್ ಕರ್ನಾಟಕವನ್ನು ಆರ್ಥಿಕ ದುಸ್ಥಿತಿಗೆ ದೂಡಲಿದೆ : ಸುನೀಲ್ ಕುಮಾರ್
  • whatsapp icon

ಬೆಂಗಳೂರು : ‘ಕಡುಬು ತಿನ್ನುವುದು ಕಹಿ ನೀರು ಕುಡಿಯುವುದು. ರಾಜ್ಯವನ್ನು 1,16000 ಕೋಟಿ ರೂ.ಸಾಲದ ಶೂಲಕ್ಕೆ ದೂಡಿರುವ ಸಿದ್ದರಾಮಯ್ಯನವರ ಹದಿನಾರನೇ ಬಜೆಟ್ ಕರ್ನಾಟಕವನ್ನು ಅಕ್ಷರಶಃ ಆರ್ಥಿಕ ದುಸ್ಥಿತಿಗೆ ದೂಡಲಿದೆ’ ಎಂದು ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್ ಟೀಕಿಸಿದ್ದಾರೆ.

ಶುಕ್ರವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಪ್ರತಿ ಬಜೆಟ್‍ನಲ್ಲಿ ಕೇಂದ್ರ ಸರಕಾರವನ್ನು ದೂರುವುದನ್ನೇ ಅಭ್ಯಾಸ ಮಾಡಿಕೊಂಡಿರುವ ಸಿದ್ದರಾಮಯ್ಯನವರ ಬಜೆಟ್‍ನಲ್ಲಿ 67,877ಕೋಟಿ ರೂ. ಕೇಂದ್ರದ ಸ್ವೀಕೃತಿಯನ್ನು ತೋರಿಸಿರುವುದು ಗಮನಾರ್ಹ ಅಂಶ. ಈ ಬಾರಿಯ ಬಜೆಟ್‍ನಲ್ಲಿ ರಾಜ್ಯಕ್ಕೆ ಅನುಕೂಲಕರವಾಗುವ ಯಾವುದೇ ದೂರಗಾಮಿ ಯೋಜನೆಗಳಿಲ್ಲ ಎಂದು ದೂರಿದ್ದಾರೆ.

ಬಜೆಟ್ ಎನ್ನುವುದು ನನ್ನ ದೃಷ್ಟಿಯಲ್ಲಿ ಕೇವಲ ಬಿಳಿಹಾಳೆಯಲ್ಲ ಎಂದು ವ್ಯಾಖ್ಯಾನಿಸಿರುವ ಸಿದ್ದರಾಮಯ್ಯನವರು ಶಾಶ್ವತ ಯೋಜನೆಗಳತ್ತ ಗಮನ ಹರಿಸಿಲ್ಲ. ಕರಾವಳಿ ಭಾಗದ ಜಿಲ್ಲೆಗಳಿಗಂತೂ ಯಾವುದೇ ಕೊಡುಗೆ ಇಲ್ಲ. ಮಂಗಳೂರಿನಿಂದ ಕಾರವಾರದವರೆಗಿನ ಕೊಂಕಣ ರೈಲ್ವೆ ಯೋಜನೆಗೆ ಸರ್ಕಾರ ನೆರವಿನ ಹಸ್ತ ಚಾಚಿಲ್ಲ ಎಂದು ಸುನೀಲ್ ಕುಮಾರ್ ಆರೋಪಿಸಿದ್ದಾರೆ.

‘ಆಕರ್ಷಣೀಯ ಘೋಷಣೆಗಳು, ಕವಿವಾಣಿಯ ಉಲ್ಲೇಖದಲ್ಲೇ ಬಜೆಟ್ ಪುಸ್ತಕ ತುಂಬಿದ್ದು, ಶಿಕ್ಷಣ, ಆರೋಗ್ಯ, ಜಲಸಂನ್ಮೂಲ, ಗ್ರಾಮೀಣಾಭಿವೃದ್ಧಿ ಯೋಜನೆಗಳ ಆಮೂಲಾಗ್ರ ಅಭಿವೃದ್ಧಿಗೆ ಯಾವುದೇ ಕೊಡುಗೆ ಇಲ್ಲ’ ಎಂದು ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಹಣಕಾಸು ತಜ್ಞರ ಒಡೆದಾಳುವ ಆರ್ಥಿಕತೆ: ‘ಸರಕಾರಿ ಕಾಮಗಾರಿಗಳಲ್ಲಿ 2ಕೋಟಿ ರೂ.ವರೆಗಿನ ಗುತ್ತಿಗೆ ಮತ್ತು 1 ಕೋಟಿ ರೂ.ವರೆಗಿನ ಖರೀದಿಯಲ್ಲಿ ಮುಸ್ಲಿಂ ಮೀಸಲಾತಿ ಕಲ್ಪಿಸುವುದಾಗಿ ರಾಜ್ಯ ಸರಕಾರ ಬಜೆಟ್‍ನಲ್ಲಿ ಘೋಷಿಸಿದೆ. ಸಿದ್ದರಾಮಯ್ಯ ಸರಕಾರದ ಹಿಂದು ವಿರೋಧಿ ನೀತಿಗೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ?. ಇಷ್ಟು ದಿನ ಮುಸ್ಲಿಮರಿಗೆ ತೆರೆಮರೆಯಲ್ಲಿ ವಿಶೇಷ ಆದ್ಯತೆ ನೀಡುತ್ತಿದ್ದ ಸಿದ್ದರಾಮಯ್ಯ ಇದೀಗ ಅದನ್ನು ಬಜೆಟ್‍ಗೂ ವಿಸ್ತರಿಸಿದ್ದಾರೆ. ಹಣಕಾಸು ತಜ್ಞರ ಒಡೆದಾಳುವ ಆರ್ಥಿಕತೆ’ ಎಂದು ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News