ಜನಾಕರ್ಷಣೆಯ ಕೇಂದ್ರವಾಗಿ ಪಿಲಿಕುಳದ ಅಭಿವೃದ್ದಿಗೆ ಚಿಂತನೆ : ಸಚಿವ ಭೋಸರಾಜು

Update: 2024-11-29 12:07 GMT

ಎನ್.ಎಸ್.ಭೋಸರಾಜು

ಬೆಂಗಳೂರು : ಮಂಗಳೂರಿನ ಪಿಲಿಕುಳ ನಿಸರ್ಗಧಾಮವನ್ನು ಜನಾಕರ್ಷಣೆ ಕೇಂದ್ರವಾಗುವಂತೆ ಸಮಗ್ರ ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ. ಈ ಬಗ್ಗೆ ಪಿಲಿಕುಳ ಅಭಿವೃದ್ದಿ ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ತಿಳಿಸಿದ್ದಾರೆ.

ಶುಕ್ರವಾರ ವಿಕಾಸಸೌಧದಲ್ಲಿನ ತಮ್ಮ ಕಚೇರಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, 2018ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಉದ್ಘಾಟನೆಯಾದ ಮಂಗಳೂರಿನ ಪಿಲಿಕುಳ ನಿಸರ್ಗಧಾಮವನ್ನು ರಾಜ್ಯದ ಪ್ರಮುಖ ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ದಿಗೊಳಿಸಲು ಅವಕಾಶಗಳಿವೆ.

ಇಲ್ಲಿ ವಿಶಾಲವಾದ ಜಾಗವಿದ್ದು ಅಂತರ್‌ರಾಷ್ಟ್ರೀಯ ಮಟ್ಟದ ಜನಾಕರ್ಷಣೆಯ ಕೇಂದ್ರವಾಗಿ ಅಭಿವೃದ್ದಿ ಪಡಿಸಬಹುದು. ಸಿಎಂ ಸಿದ್ದರಾಮಯ್ಯ, ಪಿಲಿಕುಳ ಅಭಿವೃದ್ದಿ ಪ್ರಾಧಿಕಾರದ ಸಮಿತಿಗೆ ಅನುಮೋದನೆ ನೀಡಿದ್ದಾರೆ. ಪ್ರಾಧಿಕಾರದ ಮುಂದಿನ ಸಭೆಯಲ್ಲಿ ಪಿಲಿಕುಳ ನಿಸರ್ಗಧಾಮದ ಸಮಗ್ರ ಅಭಿವೃದ್ದಿಗೆ ಅಗತ್ಯವಿರುವ ನೀಲಿನಕ್ಷೆಯ ಬಗ್ಗೆ ಚರ್ಚಿಸಲಾಗುವುದು. ನಂತರ ಮುಂದಿನ ಬಜೆಟ್‍ನಲ್ಲಿ ಪ್ರಸ್ತಾವವನ್ನು ಸರಕಾರಕ್ಕೆ ಸಲ್ಲಿಸಲಾಗುವುದು. ಇದಕ್ಕೆ ಅಗತ್ಯವಿರುವ ಕನ್ಸಲ್ಟೆಂಟ್ ಏಜನ್ಸಿ ನೇಮಕದ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

2025ರ ಜುಲೈನಲ್ಲಿ ಕ್ವಾಂಟಮ್ ಸಮಾವೇಶ :

ಇಲಾಖೆ ವತಿಯಿಂದ ಆಯೋಜಿಸಲಾಗುತ್ತಿರುವ ‘ನ್ಯಾನೋ ಸಮಾವೇಶ’ಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇದೇ ರೀತಿಯಲ್ಲಿ ಮುಂಬರುವ 2025ರ ಜುಲೈನಲ್ಲಿ ಎರಡು ದಿನಗಳ ಕಾಲ ಕ್ವಾಂಟಮ್ ಸಮಾವೇಶ ಆಯೋಜಿಸಲು ತೀರ್ಮಾನಿಸಲಾಗಿದೆ. ಕ್ವಾಂಟಮ್ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ದೇಶಗಳೊಂದಿಗೆ ಸಂಪರ್ಕದಲ್ಲಿದ್ದು, ಜ್ಞಾನ ವಿನಿಮಯಕ್ಕೆ ಮನವಿ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರ ನಿರ್ದೇಶನದಂತೆ ನಮ್ಮ ರಾಜ್ಯ ಕ್ವಾಂಟಮ್ ಕ್ಷೇತ್ರದಲ್ಲಿ ಹೊಸ ಸಾಧನೆಗೆ ಉತ್ತೇಜಿಸುವುದು ಈ ಸಮಾವೇಶದ ಉದ್ದೇಶ. ಈ ನಿಟ್ಟಿನಲ್ಲಿ ಅಗತ್ಯ ತಯಾರಿಗಳನ್ನು ಪ್ರಾರಂಭಿಸಬೇಕು ಎಂದು ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ರಾಯಚೂರು, ಚಿಕ್ಕಮಗಳೂರು ಹಾಗೂ ಯಾದಗಿರಿಯಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು. ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಿಸಲು ಯೋಜಿಸಲಾಗಿರುವ ಸೈನ್ಸ್‍ಸಿಟಿಗೆ ಅಗತ್ಯ ಭೂಮಿಯನ್ನು ಈಗಾಗಲೇ ಕೆಐಎಡಿಬಿ ನೀಡಿದೆ. ಇದರ ಸರ್ವೆ ಕಾರ್ಯವು ಮುಗಿದಿದ್ದು ಡಿಪಿಆರ್ ರಚನೆಗೆ ಕ್ರಮ ಕೈಗೊಳ್ಳಬೇಕು ಎಂದರು. ಸಭೆಯಲ್ಲಿ ಇಲಾಖೆಯ ಕಾರ್ಯದರ್ಶಿ ಏಕ್‍ರೂಪ್ ಕೌರ್, ಕೆಸ್ಪೆಪ್ಸ್ ವ್ಯವಸ್ಥಾಪಕ ನಿರ್ದೇಶಕ ಸದಾಶಿವ ಪ್ರಭು ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News