‘ದ್ವೇಷದ ರಾಜಕಾರಣ ಮಾಡುವವರಿಗೆ ಸತ್ಯ ಅರ್ಥವಾಗಲು ಸಾಧ್ಯವಿಲ್ಲ’ ಡಿಸಿಎಂ ಡಿಕೆಶಿ ವಿರುದ್ಧ ಸಿ.ಟಿ.ರವಿ ಆಕ್ರೋಶ

Update: 2025-01-14 16:58 GMT
Photo of C.T.Ravi

ಸಿ.ಟಿ.ರವಿ

  • whatsapp icon

ಬೆಂಗಳೂರು : ‘ಶಿವಕುಮಾರ್ ಅವರೇ ನೀವು ಡಿಸಿಎಂ ಎನ್ನುವುದನ್ನು ಮರೆತು ಬಿಟ್ಟಿದ್ದೀರಿ. ನೀವು ನ್ಯಾಯಾಧೀಶರ ಸ್ಥಾನದಲ್ಲಿ ಇದ್ದು, ಸತ್ಯಾಸತ್ಯತೆ ವಿಚಾರ ಮಾಡಬೇಕಾದವರು ದುರದೃಷ್ಟವಾಶಾತ್ ಯಾರದ್ದೋ ವಕೀಲರಾಗಿಬಿಟ್ಟಿದ್ದೀರಿ. ಯಾರು ಮೋಹ, ಮದ, ಮಾತ್ಸರ್ಯಗಳಿಂದ ಹೊರಗಿದ್ದು ನೋಡುತ್ತಾರೋ ಅವರಿಗೆ ಸತ್ಯಾಸತ್ಯಾತೆ ಗೊತ್ತಾಗುತ್ತದೆ. ಮೋಹಪರವಶರಾದವರಿಗೆ, ಅಧಿಕಾರದ ಮದದಿಂದ ಕೂಡಿದವರಿಗೆ, ಮಾತ್ಸರ್ಯದ ರಾಜಕಾರಣ ಮಾಡುವವರಿಗೆ ಸತ್ಯ ಅರ್ಥ ಆಗಲಿಕ್ಕೆ ಸಾಧ್ಯವಿಲ್ಲ’ ಎಂದು ಪರಿಷತ್ ಸದಸ್ಯ ಸಿ.ಟಿ.ರವಿ ಆಕ್ಷೇಪಿಸಿದ್ದಾರೆ.

ಮಂಗಳವಾರ ಎಕ್ಸ್‍ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಪರಿಷತ್ ಸಭಾಪತಿಗಳ ರೂಲಿಂಗ್ ನೀಡಿದ ನಂತರ ನೀವುಗಳು, ನಿಮ್ಮ ಪಕ್ಷದ ಶಾಸಕರು ನಡೆದುಕೊಂಡ ರೀತಿ ನಿಮಗುಚಿತವೇ? ಗೂಂಡಾಗಳನ್ನೂ, ಜೊತೆಗಾರರನ್ನು ಎತ್ತಿಕಟ್ಟಿ, ಶಾಸಕಾಂಗದ ದೇಗುಲವಾದ ‘ಸುವರ್ಣ ವಿಧಾನಸೌಧದಲ್ಲಿ’ ನನ್ನ ಮೇಲೆ ನಡೆದ ಹಲ್ಲೆಯನ್ನು ಯಾವ ದೃಷ್ಟಿಯಿಂದ ನೋಡುತ್ತೀರಿ? ಇದನ್ನು ಗಾಂಧಿಗಿರಿ ಎನ್ನಬೇಕೇ ಅಥವಾ ಗೂಂಡಾಗಿರಿ ಎನ್ನಬೇಕೇ?’ ಎಂದು ಪ್ರಶ್ನಿಸಿದ್ದಾರೆ.

‘ನಿಮ್ಮ ಸರಕಾರದ ಪೊಲೀಸರು ಮಾಡಿದ ಅಸಂವಿಧಾನಿಕ, ಅನೈತಿಕ ಬಂಧನವನ್ನು ಏನೆಂದು ಭಾವಿಸುತ್ತೀರಿ? ಪೊಲೀಸರು ರಾತ್ರಿ ಇಡೀ ನಡೆಸಿದ ದೌರ್ಜನ್ಯದ ಹಿಂದೆ ಯಾರ ಕುಮ್ಮಕ್ಕಿದೆ? ಯಾರ ಕಾಣದ ಕೈಗಳ ಪಾತ್ರವಿದೆ? ಇದನ್ನು ಮೋಹ, ಮದ, ಮಾತ್ಸರ್ಯಗಳಿಂದ ಹೊರಗಿದ್ದು ನೋಡಿ, ಸತ್ಯದರಿವು ನಿಮಗಾಗುತ್ತದೆ. ಕಪಟ ನಾಟಕ ಯಾರು ಮಾಡುತ್ತಿದ್ದಾರೆ ಎನ್ನುವುದೂ ಗೊತ್ತಾಗುತ್ತದೆ’ ಎಂದು ಅವರು ಹೇಳಿದ್ದಾರೆ.

‘ಸಾರ್ವಜನಿಕ ಬದುಕಿನಲ್ಲಿ ಸಿ.ಟಿ.ರವಿಯನ್ನು ಹೋರಾಟಗಾರ, ಕೆಲಸಗಾರ ಎಂದು ಗುರುತಿಸಿದ್ದಾರೆ. ರವಿಯನ್ನ ಪಕ್ಷನಿಷ್ಠ, ಸಿದ್ಧಾಂತ ಬದ್ಧ ಎಂದು ಗುರುತಿಸುತ್ತಾರೆಂಬುದು ನನ್ನ ಕರ್ನಾಟಕದ ಜನತೆ ತಿಳಿದಿದೆ. ‘ಯಾರು ಹೇಗಿದ್ದಾರೋ ಇತರರೂ ಹಾಗೆ ಎಂದು ಭಾವಿಸುತ್ತಾರೆ’ ಡಿಸಿಎಂ ಅವರೇ. ಅಂದಹಾಗೆ ಕಾಂಗ್ರಸ್ಸಿನ ಕೆಲ ನಾಯಕರು ‘ನಮ್ಮ ಡ್ರಾಮ(ಆ)ಕಿಂಗ್ (ಏ)ಶಿವಕುಮಾರ್‍ರವರು ಇಷ್ಟೇಲ್ಲಾ ಡ್ರಾಮಾ ಮಾಡುತ್ತಿರುವುದು ಸಿಎಂ ಗಾದಿಯನ್ನು ಏರುವ ಹಪಹಪಿಗಾಗಿ’ ಎಂದು ರಾಜಕೀಯದ ಮೊಗಸಾಲೆಗಳಲ್ಲಿ ಹೇಳಿಕೊಂಡು ಸುತ್ತುತ್ತಿರುವುದು ನಿಜವೇ?’ ಎಂದು ರವಿ ವಾಗ್ದಾಳಿ ನಡೆಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News