ಯಾರು ಶ್ರಮಪಡುತ್ತಾರೋ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ : ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು : ಯಾರು ಶ್ರಮಪಡುತ್ತಾರೋ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ನಗರದ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ನಡೆದ ನೂತನ ಕೆಪಿಸಿಸಿ ಕಾರ್ಯಾಧ್ಯಕ್ಷರುಗಳ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾರು ಎನ್‍ಎಸ್‍ಯುಐ ಹಾಗೂ ಯುವ ಕಾಂಗ್ರೆಸ್‍ನಲ್ಲಿ ಸದಸ್ಯತ್ವ ಪಡೆಯುತ್ತಾರೋ ಅವರು ಅಷ್ಟು ಸುಲಭವಾಗಿ ಪಕ್ಷವನ್ನು ತೊರೆಯುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಳ್ಳಿ. ಹೀಗಾಗಿ ಈ ಸಂಘಟನೆಗಳ ಸದಸ್ಯತ್ವ ಪಡೆಯುವವರಿಗೆ ದೊಡ್ಡ ಅಡಿಪಾಯ ಸಿಗುತ್ತದೆ ಎಂದು ಅವರು ಹೇಳಿದರು.
ಪಕ್ಷದ ನೂತನ ಕಾರ್ಯಾಧ್ಯಕ್ಷರು ಹಾಗೂ ಪದಾಧಿಕಾರಿಗಳು ನಿಷ್ಠೆ, ಪ್ರಾಮಾಣಿಕತೆ ಹಾಗೂ ಜವಾಬ್ದಾರಿ ಪ್ರದರ್ಶಿಸಬೇಕು. ನಿಮಗೆ ಕೊಟ್ಟ ಕೆಲಸವನ್ನು ಸಮರ್ಥವಾಗಿ ನಿಭಾಯಿಸದಿದ್ದರೆ ಚುನಾವಣೆ ನಂತರ ನೀವು ಮಾಜಿಯಾಗುತ್ತೀರಿ ಎಂಬುದು ನಿಮ್ಮ ತಲೆಯಲ್ಲಿರಲಿ ಎಂದು ಡಿ.ಕೆ.ಶಿವಕುಮಾರ್ ಕಿವಿಮಾತು ಹೇಳಿದರು.
ನೀವು ಶ್ರಮ ಪಟ್ಟರೆ ಮಾತ್ರ ನಿಮ್ಮ ಜವಾಬ್ದಾರಿ ಮುಂದುವರಿಯುತ್ತದೆ. ಇಲ್ಲದಿದ್ದರೆ ಚುನಾವಣೆ ನಂತರ ಈ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ ಮಾಡಲಾಗುವುದು. ನೀವು ಅಲ್ಲಿ ಸಹಕಾರ ನೀಡಿ ಕೆಲಸ ಮಾಡಬೇಕೇ ಹೊರತು ಅಲ್ಲಿ ಲೀಡರ್ ಗಿರಿ ತೋರಿಸಬಾರದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ನೀಡಿದ್ದು, ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಈ ಕೈ ಗಟ್ಟಿ ಮಾಡಲು ಸಿದ್ದರಾಮಯ್ಯ ಅವರ ಸರಕಾರ ವರ್ಷಕ್ಕೆ 52 ಸಾವಿರ ಕೋಟಿ ರೂ. ಹಣ ಮೀಸಲಿಟ್ಟಿದೆ. ನಮ್ಮ ಯೋಜನೆಗಳು 1.56 ಕೋಟಿ ಕುಟುಂಬಗಳನ್ನು ತಲುಪುತ್ತಿವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಎಐಸಿಸಿ ಐದು ಗ್ಯಾರಂಟಿಯನ್ನು ಘೋಷಣೆ ಮಾಡಿದ್ದು, ಗೃಹಲಕ್ಷ್ಮೀ ಯೋಜನೆಯಂತೆ ಮಹಾಲಕ್ಷ್ಮೀ ಘೋಷಿಸಿದ್ದು, ಈ ಯೋಜನೆಯಲ್ಲಿ ವರ್ಷಕ್ಕೆ ಬಡ ಕುಟುಂಬದ ಮಹಿಳೆಯೊಬ್ಬರಿಗೆ ವಾರ್ಷಿಕ 1 ಲಕ್ಷ ರೂ. ನೀಡಲಾಗುವುದು. ಸಾಲಮನ್ನಾ ಪ್ರಾಧಿಕಾರ ರಚನೆ, ಬೆಂಬಲ ಬೆಲೆ, ಜಾತಿ ಗಣತಿ, ನರೇಗಾ ಮಾದರಿಯಲ್ಲಿ ನಗರ ಉದ್ಯೋಗ ಖಾತ್ರಿ ಯೋಜನೆ ಜಾರಿ ಮಾಡುವ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಗ್ಯಾರಂಟಿ ಕಾರ್ಡಿಗೆ ಸಹಿ ಹಾಕಿದ್ದಾರೆ. ರಾಷ್ಟ್ರಮಟ್ಟದಲ್ಲೂ ನಮ್ಮ ಸರಕಾರ ಅಧಿಕಾರಕ್ಕೆ ಬರಲಿದೆ ಈ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ನಾಲ್ಕು ವರ್ಷಗಳಿಂದ ಪಕ್ಷದ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ, ಸಲೀಂ ಅಹ್ಮದ್, ಚಂದ್ರಪ್ಪ ಹಾಗೂ ನಮ್ಮೊಂದಿಗೆ ಇಲ್ಲದ ಧೃವನಾರಾಯಣ ಅವರ ಸಂಘಟನೆಯನ್ನು ನಾವು ಸ್ಮರಿಸಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಹಾಗೂ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಧೃವನಾರಾಯಣ ಅವರ ತಾಳ್ಮೆ ಹಾಗೂ ಶ್ರಮ ಪ್ರಶಂಸನೀಯ. ಸಲೀಂ ಅಹ್ಮದ್ ಅವರು ಶಿಸ್ತಿನ ಸಿಪಾಯಿಯಂತೆ ಕಾಂಗ್ರೆಸ್ ಪಕ್ಷದ ಸೇವೆ ಮಾಡಿದ್ದಾರೆ. ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ ಅವರು ಸಮರ್ಥವಾಗಿ ತಮ್ಮ ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ. ಇವರು ಈಗ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಸಚಿವ ಎಂ.ಬಿ ಪಾಟೀಲ್ ಅವರು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ನಾನು, ಸಿಎಂ ಸೇರಿದಂತೆ ಅನೇಕರು ಪ್ರಚಾರ ಸಮಿತಿಯಲ್ಲಿ ಕೆಲಸ ಮಾಡಿದ್ದೇವೆ. ನಾವೆಲ್ಲರೂ ವಿದ್ಯಾರ್ಥಿ ನಾಯಕರಾಗಿದ್ದಾಗಲೇ ರಾಜೀವ್ ಗಾಂಧಿ ಅವರು ನಮ್ಮನ್ನು ಗುರುತಿಸಿ ನಮಗೆ ಪಕ್ಷದ ಟಿಕೆಟ್ ನೀಡಿದ್ದರು. ನಾವು ವಿದ್ಯಾರ್ಥಿ ನಾಯಕರಾಗಿದ್ದಾಗ ಎನ್‍ಎಸ್‍ಯುಐ ಟಿಕೆಟ್ ನೀಡದಿದ್ದರೂ ಹೇಗೋ ಚುನಾವಣೆ ಮಾಡಿ ಗೆದ್ದುಕೊಂಡು ಬಂದಿದ್ದೇವೆ. ನಿಮ್ಮೆಲ್ಲರ ಸಹಕಾರದಿಂದ ಈ ಮಟ್ಟದವರೆಗೆ ಬಂದಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಇನ್ನು ತುಮಕೂರಿನ ಜೆಡಿಎಸ್ ಪಕ್ಷದಿಂದ ಗೋವಿಂದರಾಜು, ಪ್ರೇಮಾ ಮಹಲಿಂಗಪ್ಪ, ತುಮಕೂರು ತಾಲೂಕು ಪಂಚಾಯ್ತಿ ಸದಸ್ಯರಾಗಿದ್ದ ಬೋರೇಗೌಡರು, ಆರ್.ಶಂಕರ್ ಹಾಗೂ ಅವರ ತಂಡ, ಸಿ.ಎಂ.ಇಬ್ರಾಯಿಂ ಅವರ ಸುಪುತ್ರ ಸಿ.ಎಂ.ಫಯಾಸ್ ಅವರು ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಸಂತಸದ ವಿಚಾರ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷರಾದ ಜಿ.ಸಿ ಚಂದ್ರಶೇಖರ್, ಮಂಜುನಾಥ ಭಂಡಾರಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಎಐಸಿಸಿ ಕಾರ್ಯದರ್ಶಿ ರೋಜಿ ಎಂ. ಜಾನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸ್ವಾಮಿ ಉಪಸ್ಥಿತರಿದ್ದರು.